Monday, November 3, 2025
Google search engine

Homeರಾಜಕೀಯಮೈಮುಲ್ ಅಧ್ಯಕ್ಷರಾಗಿ ಈರೇಗೌಡ ಆಯ್ಕೆ

ಮೈಮುಲ್ ಅಧ್ಯಕ್ಷರಾಗಿ ಈರೇಗೌಡ ಆಯ್ಕೆ

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಈರೇಗೌಡ ಅವಿರೋಧವಾಗಿ ಆಯ್ಕೆಯಾದರು.

ಪೂರ್ವ ನಿಗದಿಯ ಒಪ್ಪಂದದಂತೆ ಎರಡನೇ ಅವಧಿಯನ್ನು ಈರೇಗೌಡರಿಗೆ ಅವಕಾಶ ನೀಡಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಣತಿಯಂತೆ ಸದಸ್ಯರು ಅವಿರೋಧ ಆಯ್ಕೆಗೆ ಸಹಕರಿಸಿದರು.

ಚುನಾವಣಾಧಿಕಾರಿ ಶ್ರೀಧರ್ ನಿಯಮದಂತೆ ಬೆ.10.30ಕ್ಕೆ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಯಿತು. ಈ ವೇಳೆ ಈರೇಗೌಡ ಅವರೊಬ್ಬರೇ ನಾಮಪತ್ರ ಸಲ್ಲಿಸಿದರು. 12 ಗಂಟೆವರೆಗೂ ನಾಮಪತ್ರ ಸಲ್ಲಿಕೆ ಅವಕಾಶ ನೀಡಲಾಗಿತ್ತಾದರೂ ಯಾರು ಸಹ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಬಳಿಕ ಚುನಾವಣಾಧಿಕಾರಿಗಳು ಈರೇಗೌಡರ ನಾಮಪತ್ರ ಪುರಸ್ಕರಿಸಿ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಈ ವೇಳೆ ಎಲ್ಲಾ ನಿರ್ದೇಶಕರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನ ಆಯ್ಕೆಗೆ ಕಾರಣರಾದ ಸಿಎಂ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ‌‌ರಾದ ಅನಿಲ್ ಚಿಕ್ಕಮಾದು ಹಾಗೂ ಸಹಕಾರಿ ಧುರೀಣರಾದ ಜಿ.ಟಿ.ದೇವೇಗೌಡ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆಂದರು.

ಸಹಕಾರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಎಚ್.ಡಿ.ಕೋಟೆ ತಾಲ್ಲೂಕಿಗೆ ಅಧ್ಯಕ್ಷರಾಗುವ ಅವಕಾಶ ನನಗೆ ಸಿಕ್ಕ ಖುಷಿಯಿದೆ‌. ಆತ್ಯಂತ ಹಿಂದುಳಿದ ಜಿಲ್ಲೆಯಾದ ಕಾರಣಕ್ಕಾಗಿ ತಾಲ್ಲೂಕಿನಲ್ಲಿ ಹೈನುಗಾರಿಕೆ ಬೆಳೆದಿರಲಿಲ್ಲ. 19 ಸಂಘಗಳಿದ್ದ ಸಂಘಗಳ‌ ಸಂಖ್ಯೆ ಈಗ 186ಕ್ಕೆ ಹೆಚ್ಚಳವಾಗಿದೆ. ನಾಲ್ಕನೇ ಬಾರಿ ನಿರ್ದೇಶಕನಾಗಿ ಅಧ್ಯಕ್ಷನಾಗಿರುವ ಖುಷಿ ನನಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೈನೋದ್ಯಮ ಬೆಳೆಸಲು ಶ್ರಮಿಸುತ್ತೇನೆ. ಹಿಂದುಳಿದ ಸಮುದಾಯ ಹೆಚ್ಚು ಹೈನೋದ್ಯಮಕ್ಕೆ ಬರಬೇಕಿದೆ ಎಂದರು.

ರೈತನ ಮಗನಾಗಿ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯವನ್ನು ನಿರ್ದೇಶಕರೆಲ್ಲರ ಸಹಕಾರದಿಂದ ಕಲ್ಪಿಸಲು ಬದ್ಧನಾಗಿದ್ದೇನೆಂದರು. ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಪನ್ನೀರ್ ಘಟಕ ಹಾಗೂ ಹಾಲು ಶೇಖರಣಾ ಘಟಕ ಸ್ಥಾಪನೆ ಪ್ರಕ್ರಿಯೆಯಲ್ಲಿದೆ. ಇದನ್ನು ನನ್ನ ಅವಧಿಯಲ್ಲಿ ಉದ್ಘಾಟಿಸುವವರೆಗೂ ಹಿಂದುಳಿದ ತಾಲ್ಲೂಕಿನಿಂದ ಬಂದ ತಮಗೆ ಅವಕಾಶ ನೀಡಿ ಎಂದು ಮುಖ್ಯಮಂತ್ರಿ ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಐದು ತಿಂಗಳ ಅವಧಿ

ಈರೇಗೌಡರು ಮೈಸೂರು ಜಿಲ್ಲೆಯ ಹಿಂದುಳಿದ ಎಚ್.ಡಿ.ಕೋಟೆ ತಾಲ್ಲೂಕಿನಿಂದ ಆಯ್ಕೆಯಾದ ಪ್ರಥಮ ಅಧ್ಯಕ್ಷರಾಗಿದ್ದು, ಮಾರ್ಚ್ ಗೆ ಇವರ ಅವಧಿ ಪೂರ್ಣಗೊಳ್ಳಲಿದೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಮೀಪ ಇರುವ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿಗೆ ದುಡಿಯುತ್ತೇನೆ. ನಾನು ದುಡಿದರೆ ಐದನೇ ಬಾರಿಯೂ ಆಯ್ಕೆ ಮಾಡುತ್ತಾರೆ ಇಲ್ಲವಾದರೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ನಿರ್ದೆಶಕರಾದ ಎ.ಟಿ. ಸೋಮಶೇಖರ, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಪಿ.ಎಂ.ಪ್ರಸನ್ನ, ಆರ್‌.ಚೆಲುವರಾಜು,  ಕೆ.ಎಸ್.ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ  ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ್ ಇತರರು ಹಾಜರಿದ್ದರು. ಇದೇ ವೇಳೆ ಜಿಪಂ ಮಾಜಿ ಸದಸ್ಯ ಮಾದೇಗೌಡ ಸೇರಿ ಅನೇಕರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

RELATED ARTICLES
- Advertisment -
Google search engine

Most Popular