ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ಮಾಜಿ ಸಂಸದ ರಮೇಶ ಕತ್ತಿ ನಾಯಕ ಸಮುದಾಯದ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆಂಬ ಆರೋಪದ ಮೇಲೆ ಸಮುದಾಯದ ಮುಖಂಡ ರಾಜಶೇಖರ ತಳವಾರ ನೀಡಿರುವ ದೂರಿನ ಆಧಾರದ ಮೇಲೆ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್‌ಐಆರ್ ದಾಖಲಾಗಿದೆ. ನಗರದ ಡಿಸಿಸಿ ಬ್ಯಾಂಕ್ ಚುನಾವಣೆ ಮತದಾನ ಕೇಂದ್ರದ ಆವರಣದಲ್ಲಿ ಮಾಜಿ ಶಾಸಕ ಮಹಾಂತೇಶ ದೊಡಗೌಡರ ಸೇರಿ ವಿವಿಧ ಮುಖಂಡರು ಚುನಾವಣೆ ಕುರಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಮಾಜಿ ಸಂಸದ ರಮೇಶ ಕತ್ತಿ ನಾಯಕ ಸಮುದಾಯದ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಕೇಸ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ ಕತ್ತಿ ಸ್ಪಷ್ಟಿಕರಣ: ರಾಜಕೀಯ ದುರುದ್ದೇಶದಿಂದ ವಿಡಿಯೋ ತಿರುಚಲಾಗಿದೆ. ಗೆಲುವಿನ ಸಂಭ್ರಮಾಚರಣೆ
ಮಾಡಲು ಬೆಂಬಲಿಗರು ಡಾಲ್ಸಿ ಹಚ್ಚಲು ಒತ್ತಾಯಿಸುತ್ತಿದ್ದರು. ಈ ವೇಳೆ ಹೇಳಿರುವ “ಬ್ಯಾಡೋ ಎನ್ನುವ ಪದದ ವಿಡಿಯೋ ತಿರುಚಲಾಗಿದೆ. ಆ ಸಮುದಾಯದ ಬಗ್ಗೆ ಗೌರವವಿಟ್ಟು ಬೆಳೆದಿರುವ ನಾವು, ಅವರ ಆಶೀರ್ವಾದಿಂದಲೇ ದಿ.ಉಮೇಶ ಕತ್ತಿ ಎಂಟು ಬಾರಿ ಶಾಸಕ, ಸಚಿವರಾಗಿದ್ದರು. ನಾನು ಸಂಸದನಾದೆ, ವಿದ್ಯುತ್ ಸಹಕಾರಿ ಬ್ಯಾಂಕ್, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಇದನ್ನು ಸಹಿಸಿಕೊಳ್ಳಲಾಗದವರು ನನ್ನ ವಿಡಿಯೋ ತಿರುಚಿದ್ದಾರೆ. ಇದರಿಂದ ನಾಯಕ ಸಮುದಾಯಕ್ಕೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ವಿಡಿಯೋ ಮೂಲಕ ಮಾಜಿ ಸಂಸದ ರಮೇಶ ಕತ್ತಿ ಸೃಷ್ಟಿಕರಣ ನೀಡಿದ್ದಾರೆ.



                                    