ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗೇಟ್ ಬಳಿ ಕಾರು ಹಾಗೂ ಸ್ಕೂಟರ್ ನಡುವೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಸಾಲಿಗ್ರಾಮ ಪಟ್ಟಣದ ರಾಂಪುರ ಬಡಾವಣೆಯ ಸಣ್ಣನಿಂಗನಾಯಕ (50) ಅವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ತಾಲೂಕಿನ ಭೇರ್ಯ ಕಡೆಯಿಂದ ಸಾಲಿಗ್ರಾಮದ ಕಡೆಗೆ ಬರುತ್ತಿದ್ದ ಕಾರೊಂದು ಮೂಡಲಬೀಡು ಗೇಟಿನಲ್ಲಿ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಸಣ್ಣನಿಂಗನಾಯಕ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ತಕ್ಷಣ
ಸಣ್ಣನಿಂಗನಾಯಕ ಅವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದವರ ಆಕ್ರಂದನ. ಮುಗಿಲು ಮುಟ್ಟಿತ್ತು. ಘಟನೆಯ ವಿಷಯ ಹರಡುತ್ತಿದ್ದಂತೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಆಸ್ಪತ್ರೆಗೆ ಧಾವಿಸಿ ಮೃತರ ಅಂತಿಮ ದರ್ಶನವನ್ನು ಪಡೆದು ಕಂಬನಿ ಮಿಡಿದರು.
ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಮೃತ ದೇಹವನ್ನು ನೀಡಲಾಯಿತು. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರ ಅಂತ್ಯಕ್ರಿಯೆ ಪಟ್ಟಣದ ರಾಂಪುರ ಬಡಾವಣೆಯಲ್ಲಿ ಭಾನುವಾರ ನಡೆಯಿತು. ಮೃತರು ಪತ್ನಿ ಶಕುಂತಲ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



                                    