ಮೈಸೂರು : ದನ ಮೇಯಿಸುವಾಗ ಹುಲಿ ದಾಳಿಯಿಂದಾಗಿ ರೈತ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರೈತನನ್ನು ನೋಡಲು ಶವಾಗಾರಕ್ಕೆ ಆಗಮಿಸಿದ್ದ ಸಚಿವ ಈಶ್ವರ್ ಖಂಡ್ರೆಗೆ ರೈತರು ಘೇರಾವ್ ಹಾಕಿದ ಘಟನೆ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ನಡೆದಿದೆ.
ಮೃತ ರೈತನನ್ನು ರಾಜಶೇಖರ್ ಎಂದು ಗುರುತಿಸಲಾಗಿದ್ದು, ಭಾನುವಾರ (ಅ.26) ಹೆಚ್‌ಡಿ ಕೋಟೆ ಸರಗೂರು ತಾಲ್ಲೂಕಿನಲ್ಲಿ ದನ ಮೇಯಿಸುವಾಗ ಹುಲಿ ದಾಳಿಯಿಂದ ಸಾವನ್ನಪ್ಪಿದ್ದರು.
ಇಂದು ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ ಮೃತ ರೈತನ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಸಚಿವ ಈಶ್ವರ್ ಖಂಡ್ರೆ ಆಗಮಿಸಿದ್ದರು. ಈ ವೇಳೆ ರೈತರು ಸಚಿವರಿಗೆ ಘೇರಾವ್ ಹಾಕಿ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಪ್ರಾಣಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡಬೇಕು. ಘಟನೆಗೆ ಕಾರಣೀಕರ್ತರಾದವರಿಗೆ ತಕ್ಷಣ ವಜಾ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಮೃತ ರೈತನ ಮೃತದೇಹವನ್ನು ಮೈಸೂರಿಗೆ ತಂದಿದಕ್ಕೆ ಆಕ್ಷೇಪ ಹೊರಹಾಕಿದ್ದಾರೆ. ಭಾನುವಾರ ಸರಗೂರಿನಲ್ಲಿದ್ದರೂ ಸಚಿವರು ಬರಲಿಲ್ಲ. ಇವತ್ತು ಘಟನಾ ಸ್ಥಳದಲ್ಲಿ ಗಲಾಟೆ ಆಗುತ್ತೆ ಅಂತ ಗೊತ್ತಿತ್ತು. ಅದಕ್ಕೆ ಮೈಸೂರಿಗೆ ಮೃತದೇಹ ತಂದಿದ್ದೀರಿ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಈಶ್ವರ್ ಖಂಡ್ರೆ ಮಾತನಾಡಿ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡುತ್ತೇವೆ, ಹೆಚ್ಚಿನ ಪರಿಹಾರಕ್ಕೂ ಪ್ರಯತ್ನಿಸುತ್ತೇವೆ. ಯಾರೇ ಅಕ್ರಮ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಂತೆ ಗಲಾಟೆ ಹೆಚ್ಚಾಗಿ ಯಾವುದೇ ಸ್ಪಷ್ಟ ನಿಲುವು ತಾಳದೆ ಸಚಿವರು ಹೊರಟು ಹೋಗಿದ್ದಾರೆ. ರೈತರ ಪ್ರಶ್ನೆಗಳಿಗೆ ಸಚಿವರು ಸರಿಯಾದ ಉತ್ತರ ನೀಡದ ಹಿನ್ನೆಲೆ ಶವಾಗಾರದ ಮುಂದೆ ರೈತರು ಧರಣಿ ನಡೆಸಿದ್ದಾರೆ.



                                    