ಮಂಗಳೂರು (ದಕ್ಷಿಣ ಕನ್ನಡ):  ಸ್ಪೀಕರ್ ಕಚೇರಿಯಲ್ಲಿ ಆಡಳಿತಾತ್ಮಕ ಸುಧಾರಣೆ ಹೆಸರಲ್ಲಿ ಕೋಟ್ಯಂತರ ರೂಪಾಯಿಯ ಭ್ರಷ್ಟಾಚಾರ ನಡೆದಿದೆ ಎಂದು ಮಂಗಳೂರು ನಗರದ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ಆರೋಪ ಮಾಡಿದ್ದಾರೆ.
ಅವರು ಮಂಗಳವಾರ ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಅನಾವಶ್ಯಕವಾಗಿ ಕೋಟ್ಯಂತರ ರೂಪಾಯಿಯ ದುಬಾರಿ ವೆಚ್ಚದಲ್ಲಿ ಶಾಸಕರ ಭವನವನ್ನು ಸ್ಮಾರ್ಟ್ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಲು ಹೊರಟರೆ, ಸ್ಪೀಕರ್ ಕಚೇರಿ ವಿಚಾರ ಮಾಹಿತಿ ಹಕ್ಕು ವ್ಯಾಪ್ತಿಗೆ ಒಳಪಡುವುದಿಲ್ಲ. ಇದನ್ನೇ ಬಂಡವಾಳ ವಾಗಿಟ್ಟು ಕೊಂಡು ಸ್ಪೀಕರ್ ಅವರು ಹಣಕಾಸು ದುರುಪಯೋಗ ಮಾಡಿರುವ ಶಂಕೆ ಇದೆ. ಈ ಬಗ್ಗೆ ಬಿಜೆಪಿ ವತಿಯಿಂದ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದರು.
ಯಾವುದೇ ವಸ್ತು ಖರೀದಿಸಲು ಹಣಕಾಸು ಇಲಾಖೆಯ ಅನುಮತಿ ಮತ್ತು ಟೆಂಡರ್ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸಬೇಕು. ಆದರೆ ಇಲ್ಲಿ ಅಂತಹ ನಿಯಮಗಳ ಪಾಲನೆಯಾಗಿಲ್ಲ. ಹಣಕಾಸು ಇಲಾಖೆಯ ಅನುಮತಿ ಇಲ್ಲದೆಯೇ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ. ಎಲ್ಲಾ ವಸ್ತುಗಳಿಗೂ ಎರಡು ಮೂರು ಪಟ್ಟು ಹೆಚ್ಚು ದರ ತೋರಿಸಿ ಇಲಾಖೆಯ ಅನುಮತಿ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ವಿಧಾನಸೌಧಕ್ಕೆ ವಿದ್ಯುತ್ ದೀಪಾಲಂಕಾರ, ಶಾಸಕರ ಭವನಕ್ಕೆ ಹಾಸಿಗೆ, ದಿಂಬುಗಳ ಖರೀದಿ, ದುಂದುವೆಚ್ಚದ ವಿದೇಶಿ ಅಧ್ಯಯನ ಪ್ರವಾಸ, ವಿಧಾನಸೌಧದ ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ಸ್ಥಾಪನೆಯಲ್ಲಿ ಅಕ್ರಮ ನಡೆದಿರುವ ಶಂಕೆ ಇದೆ. ಕೋಟಿ ಕೋಟಿ ಖರ್ಚು ಮಾಡಿ ಮರದ ಬಾಗಿಲು, ಅನಗತ್ಯ ನೆಲಹಾಸು ಹೊದಿಕೆ, ದುಬಾರಿ ಪುಸ್ತಕ ಮೇಳ, ಸಭಾಂಗಣದ ಒಳಗೆ ಎಐ ಕ್ಯಾಮರಾ ಹಾಗೂ ಹೊಸದಾಗಿ ಟಿವಿ ಆಳವಡಿಕೆಗೆ ಬೇಕಾಬಿಟ್ಟ ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು.
ಇನ್ನು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಹಿಂದೆ ಸಭಾಧ್ಯಕ್ಷರ ಪಕ್ಷಪಾತಿ ನಿರ್ಣಯಕೂಡ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಪ್ರಸ್ತಾಪಿಸಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ರಾಜಗೋಪಾಲ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂರ್ಣಿಮಾ, ರಮೇಶ್ ಕಂಡೆಟ್ಟು, ವಸಂತ ಪೂಜಾರಿ, ಅರುಣ್ ಶೇಟ್ ಉಪಸ್ಥಿತರಿದ್ದರು.



                                    