ಹುಣಸೂರು : ಮನುಷ್ಯನಿಗೆ ನಾನು ತಪ್ಪು ಮಾಡಿದರೆ ಕಾನೂನಿನಲ್ಲಿ ಶಿಕ್ಷೆ ಆಗುತ್ತದೆ ಎಂಬ ಅರಿವಿದ್ದರೂ ತಪ್ಪು ಮಾಡುತ್ತಾನೆ ಎಂದು ಎಸಿಡಿಪಿಓ ಕೆ. ಸೋಮಯ್ಯ ಬೇಸರ ವ್ಯಕ್ತಪಡಿಸಿದರು.
ನಗರದ ರೋಟರಿ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಹುಣಸೂರು ರೋಟರಿ ಕ್ಲಬ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುಣಸೂರು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅರಿವಿನ ಅಗತ್ಯತೆ ಇದೆ. ಹೆಣ್ಣುಮಕ್ಕಳ ಸಾಮಾಜಿಕ ರಕ್ಷಣೆಯ ಜತೆಗೆ ಕಾನೂನು ಜಾಗೃತಿ ಮತ್ತು ಸಂವಿಧಾನದಲ್ಲಿರುವ ಅರಿವು ಪಡೆದರೆ ಕಾನೂನು ಚೌಕಟ್ಟು ಮೀರಿ ಯಾರೂ ತಪ್ಪು ಮಾಡಲಾರರು ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಜಿ. ಹರೀಶ್ ಮಾತನಾಡಿ, ಲಿಂಗಪಾತ ಶುರುವಾಗಿದ್ದು ಹೆಣ್ಣು ಗಂಡು ಎಂಬ ಭೇದವಿಲ್ಲದೆ, ಸಮಾನತೆ ಇರಲಿ ಎಂದು. ಹಿಂದೆಲ್ಲ ಹೆಣ್ಣು ಗರ್ಭಿಣಿಯಾದ ಸಂದರ್ಭದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಲಾಗುತ್ತಿತ್ತು. ಅದರ ಕಡಿವಾಣಕ್ಕೆ ಜಾಗೃತಿ ಮೂಡಿಸಲು ಆ ಕ್ರಮ ಅನುಸರಿಸಲಾಯಿತು ಎಂದರು.
2006ರ ನಂತರ ಭಾಗ್ಯ ಲಕ್ಷ್ಮಿ ಯೋಜನೆ ಅಸ್ತಿತ್ವಕ್ಕೆ ಬಂದಮೇಲೆ ಜಾತಿ ಭೇದವಿಲ್ಲದೆ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಅದೇ ರೀತಿ ಶೈಕ್ಷಣಿಕ, ಉದ್ಯೋಗ, ದುಡಿಮೆ ಜಾಸ್ತಿಯಾಗಿದ್ದು, ಕ್ರಮೇಣ ಹೆಣ್ಣು ಮಕ್ಕಳು ಬಾಲ್ಯವಿವಾಹಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅವರ ರಕ್ಷಣೆ ಸುಲಭವಾಗಿದೆ ಎಂದರು.
ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಮನೆ ಇರಲಿ, ಕಛೇರಿ ಇರಲಿ, ಶಾಲಾ, ಕಾಲೇಜೇ ಇರಲಿ ಹೆಣ್ಣಿಗೆ ಪುರುಷ ಸಮಾಜ ಗೌರವ ಕೊಟ್ಟರೆ ಹೆಣ್ಣು ಮನೆಯ ಹೊರಗೆ ಇದ್ದರೂ ಭಯವಿಲ್ಲದೆ ಬದುಕ ಬಲ್ಲಳು ಎಂದರು.
ಆರೋಗ್ಯ ಇಲಾಖೆಯ ಜಯಶ್ರೀ ಮಾತನಾಡಿ ಇತ್ತೀಚೆಗೆ ಭ್ರೂಣ ಲಿಂಗ ಪತ್ತೆ ಕಾರ್ಯ ಹೆಚ್ಚಾಗಿದ್ದು, ತಾಯಿ, ಮಗುವಿನ ಮೇಲೆ ದುಷ್ಪರಿಣಾಮ ಬೀರಲಿದೆ. ಹೆಚ್ಚಿನ ಆರೈಕೆಗಾಗಿ ಕಾನೂನು ದುರುಪಯೋಗವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಶ್ಯಾಮಣ್ಣ ಧರ್ಮಾಪುರ , ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ದೀಪ, ಶಿಶು ಯೋಜನಾ ಇಲಾಖೆಯ ಬಸಮ್ಮ, ಸುಮಂಗಲಿ, ಸರಸ್ವತಿ, ಶೋಭ ಇದ್ದರು.



                                    