ಬೆಂಗಳೂರು : 2026-27 ಶೈಕ್ಷಣಿಕ ವರ್ಷದಿಂದ ರಾಜ್ಯದ ಎಂಟು ಸರಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಡಾಕ್ಟರ್ ಆಫ್ ಮೆಡಿಸಿನ್(ಎಂ.ಡಿ.), ಮಾಸ್ಟರ್ ಆಫ್ ಸರ್ಜರಿ(ಎಂ.ಎಸ್.) ಕೋರ್ಸ್‍ಗಳನ್ನು ಆರಂಭಿಸಲಾಗುವುದು ಎಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ.
ವಿಜಯಪುರ, ಬಾಗಲಕೋಟೆ, ತುಮಕೂರು, ಕೋಲಾರ, ರಾಮನಗರ, ಮೈಸೂರು ಜಿಲ್ಲಾ ಆಸ್ಪತ್ರೆ, ಬೆಂಗಳೂರಿನಲ್ಲಿರುವ ಜಯನಗರದ ಸರಕಾರಿ ಆಸ್ಪತ್ರೆ ಮತ್ತು ಕೆ.ಸಿ. ಜನರಲ್ ಆಸ್ಪತ್ರೆಗಳು ಎಂಡಿ/ಎಂಎಸ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಅರ್ಹವಾಗಿದ್ದು, ಈ ಉಪಕ್ರಮದ ಸಂಪೂರ್ಣ ಸಂಯೋಜನೆ ಮತ್ತು ಅನುಷ್ಠಾನದ ಜವಾಬ್ದಾರಿಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಿಗೆ ವಹಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯು ಬೋಧಕ ವರ್ಗದ ಹುದ್ದೆ ಸಮಾನತೆ, ಉಪನ್ಯಾಸಕರ ಬಳಕೆ ಹಾಗೂ ಪರಿಶೀಲನೆ ಪ್ರಕ್ರಿಯೆಗಳಿಗೆ ಅನುಕೂಲವಾಗುವಂತೆ ಅಗತ್ಯವಾದ ಸ್ಪಷ್ಟಿಕರಣಗಳನ್ನು ನೀಡುತ್ತದೆ. ಹೊಸದಾಗಿ ಗುರುತಿಸಲಾದ ಡಿಎನ್‍ಬಿ ಕೇಂದ್ರಗಳಾದ ರಾಮನಗರ ಮತ್ತು ಮೈಸೂರು ಜಿಲ್ಲಾ ಆಸ್ಪತ್ರೆಗಳ ಪ್ರಾರಂಭಿಕ ವೆಚ್ಚವನ್ನು ಲಭ್ಯವಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ(ಎಬಿ-ಎಆರ್‍ಕೆ) ನಿಧಿಯಿಂದ ಭರಿಸಬೇಕು ಎಂದು ಹೇಳಿದೆ.
ಇತರೆ ಡಿಪ್ಲೊಮೇಟ್ ಆಫ್ ನ್ಯಾಶನಲ್ ಬೋರ್ಡ್‍ನಿಂದ(ಡಿಎನ್‍ಬಿ) ಮಾನ್ಯತೆ ಪಡೆದ ಆಸ್ಪತ್ರೆಗಳು ಅರ್ಜಿ ಪ್ರಕ್ರಿಯೆಗೆ ಹಾಗೂ ಸಂಬಂಧಿಸಿದ ವೆಚ್ಚಗಳನ್ನು ಪೂರೈಸಲು ಡಿಎನ್‍ಬಿ ವಿದ್ಯಾರ್ಥಿ ಶುಲ್ಕ ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಉಪಯೋಗಿಸಿಕೊಳ್ಳಬೇಕು. ನೇಮಕಗೊಂಡ ಉಪನ್ಯಾಸಕರ ಸಂಭಾವನೆ ಹಾಗೂ ಶಿಷ್ಯವೇತನ ಮುಂತಾದ ಮರುಕಳಿಸುವ ವೆಚ್ಚವನ್ನು ಎನ್‍ಎಚ್‍ಎಂ ಕಾರ್ಯಕ್ರಮ ಅನುಷ್ಠಾನ ಯೋಜನೆ ಅಡಿಯಲ್ಲಿ ಪ್ರಸ್ತಾಪಿಸಬೇಕು ಎಂದು ತಿಳಿಸಿದೆ.



