ನವದೆಹಲಿ : ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ನಿಗೂಢ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಭದ್ರತಾ ಪಡೆಗಳ ಮುಖ್ಯಸ್ಥರ ಜತೆ ಅಮಿತ್ ಶಾ ಇಂದು ಸಭೆ ನಡೆಸಲಿದ್ದಾರೆ. ನಿನ್ನೆ ಘಟನಾ ಸ್ಥಳಕ್ಕೆ ಶಾ ಭೇಟಿ ನೀಡಿದ್ದರು.
ದೆಹಲಿಯ ಕೆಂಪುಕೋಟೆ ಹೊರಗೆ ಸಂಭವಿಸಿದ ಭೀಕರ ಸ್ಫೋಟದ ಘಟನೆಯ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಹತ್ವದ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಈ ಸಭೆಯು ದೇಶದ ಆಂತರಿಕ ಭದ್ರತಾ ಸನ್ನಿವೇಶವನ್ನು ಪರಿಶೀಲಿಸುವ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸುವ ಕುರಿತು ಕೇಂದ್ರೀಕೃತವಾಗಲಿದೆ.
ಈ ಸಭೆಯಲ್ಲಿ, ಭದ್ರತಾ ಪಡೆಗಳ ಮುಖ್ಯಸ್ಥರು, ದೆಹಲಿ ಪೊಲೀಸ್ ಆಯುಕ್ತರು, ಗುಪ್ತಚರ ಬ್ಯೂರೋ ಮುಖ್ಯಸ್ಥರು ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ದೆಹಲಿಯಲ್ಲಿ ಸಂಭವಿಸಿದ ಕಾರು ಬಾಂಬ್ ಸ್ಫೋಟದಂತಹ ಘಟನೆಗಳ ನಂತರ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸುವ ಅಗತ್ಯತೆಯ ಕುರಿತು ವ್ಯಾಪಕ ಚರ್ಚೆ ನಡೆಸಲಾಗುತ್ತದೆ.



