ನವದೆಹಲಿ : ಕಾಂಗ್ರೆಸ್ ಹೈಕಮಾಂಡ್ ಅನಗತ್ಯ ರಾಜಕೀಯ ಗೊಂದಲ ಸೃಷ್ಟಿ ಮಾಡದಂತೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಭೇಟಿ ವೇಳೆ ಸಂಸದ ರಾಜಶೇಖರ್ ಹಿಟ್ನಾಳ್ ಆಯೋಜಿಸಿದ್ದ ಡಿನ್ನರ್ ಪಾರ್ಟಿ ರದ್ದಾಗಿದೆ.
ನ.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಭೇಟಿ ವೇಳೆ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಡಿನ್ನರ್ ಪಾರ್ಟಿ ಆಯೋಜಿಸಿದ್ದರು. ದೆಹಲಿಯ ಹಿಟ್ನಾಳ್ ಮನೆಯಲ್ಲೇ ಮುಖ್ಯಮಂತ್ರಿ ಸೇರಿದಂತೆ ಕೆಲವು ಸಚಿವರು ಸೇರುವ ನಿರ್ಧಾರವಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಯಾವುದೇ ಸಭೆ ಮಾಡದಂತೆ ಸೂಚನೆ ಕೊಟ್ಟಿದೆ. ಕಪಿಲ್ ಸಿಬಲ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೂಚನೆ ನೀಡಿದೆ.
ಹೆಚ್ಚು ದಿನ ದೆಹಲಿಯಲ್ಲಿದ್ದು, ಅನಗತ್ಯ ರಾಜಕೀಯ ಗೊಂದಲ ಸೃಷ್ಟಿ ಮಾಡದಂತೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ಸಂಸದ ಹಿಟ್ನಾಳ್ ದೆಹಲಿ ಮನೆಯಲ್ಲಿ ಆಯೋಜಿಸಿದ್ದ ಡಿನ್ನರ್ ಪಾರ್ಟಿ ರದ್ದಾಗಿದೆ.
ನ.8ರಂದು ಸಂಸದ ರಾಜಶೇಖರ್ ಹಿಟ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಔತಣಕೂಟಕ್ಕೆ ಆಹ್ವಾನಿಸಿರುವುದಾಗಿ ತಿಳಿಸಿದ್ದರು. ಸಚಿವರು, ಶಾಸಕರು, ಸಂಸದರು ಎಲ್ಲರೂ ಆಗಮಿಸುತ್ತಾರೆ. ಕೇವಲ ಆತ್ಮೀಯತೆಗಾಗಿ ಕರೆದಿರುವುದು, ಇದರಲ್ಲಿ ಬೇರೆ ವಿಶೇಷ ಏನಿಲ್ಲ ಎಂದು ತಿಳಿಸಿದ್ದರು.
.



