ಮೈಸೂರು: ಎಲ್ಲಾ ಅಧಿಕಾರಿಗಳು ಇನ್ನೂ ಮುಂದೆ ತಾವು ನಿರ್ವಹಿಸಿದ ಕೆಲಸ, ಎಲ್ಲಿಗೆ ಭೇಟಿ ನೀಡಲಾಗಿತ್ತು, ಅಲ್ಲಿ ಏನು ಸೂಚನೆ ನೀಡಲಾಗಿದೆ ಎಂಬ ಬಗ್ಗೆ ಡೈರಿ ಬರೆಯಲು ಆದೇಶಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕೆಡಿಪಿ ಸಭೆಯ ಕುರಿತು ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸರ್ಕಾರಿ ಅಧಿಕಾರಿಗಳು ಯಾವುದೇ ಇಲಾಖೆಯಾದರೂ ಕೇಂದ್ರ ಸ್ಥಾನದಲ್ಲೇ ವಾಸಿಸಬೇಕು, ತಾಲ್ಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡುವವರು ಜಿಲ್ಲಾಮಟ್ಟದಲ್ಲಿ ನೆಲೆಸುವುದು, ತಾಲ್ಲೂಕು ಹಾಗೂ ಗ್ರಾಮಗಳಿಗೆ ಪ್ರತಿನಿತ್ಯ ಸಂಚರಿಸುವುದು ಸರಿಯಲ್ಲ. ಕೇಂದ್ರ ಸ್ಥಾನದಲ್ಲೇ ವಾಸಿಸಬೇಕು ಮತ್ತು ಕಚೇರಿಯಲ್ಲಿ ಹಾಜರಿದ್ದು ಜನರ ಸಮಸ್ಯೆ ಸ್ಪಂದಿಸಬೇಕು ಎಂದು ಈ ಮೊದಲೇ ಸೂಚಿಸಿದ್ದೇನೆ. ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜಾತಿ ಆದಾಯ ಮತ್ತು ಜಾತಿ ಸಿಂಧು ಪ್ರಮಾಣ ಪತ್ರಗಳನ್ನು ನೀಡುವ ವಿಚಾರದಲ್ಲಿ ನಿಧಾನ ಮಾಡಬಾರದು. ತಕ್ಷಣ ತಕ್ಷಣ ನೀಡುವ ಪದ್ಧತಿ ರೂಢಿಸಿಕೊಳ್ಳಿ ಎನ್ನುವ ಸೂಚನೆಯನ್ನು ನೀಡಲಾಗಿದೆ ಎಂದರು.
ಯಾವುದೇ ಪ್ರಕರಣ ದಾಖಲಾದ 90 ದಿನದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು, ಗಂಭೀರ ಪ್ರಕರಣಗಳು ನಡೆದಾಗ ಜಿಲ್ಲಾಮಟ್ಟದಲ್ಲಿ ಎಸ್‌ಪಿಗಳು ಹಾಗೂ ನಗರ ಪ್ರದೇಶಗಳಲ್ಲಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಬೇಕು. ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕು. ಕಾಲಕಾಲಕ್ಕೆ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಬೇಕು. ಅಪರಾಧಿಗಳು ಮತ್ತು ರೌಡಿಗಳ ಜೊತೆ ಬಿಟ್ಟು ಉಳಿದವರ ಜೊತೆ ಜನಸ್ನೇಹಿಯಾಗಿರಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.
ಕೊಲೆ, ಡಕಾಯಿತಿ, ಸರಗಳ್ಳತನ ಮತ್ತಿತರ ಅಪರಾಧಗಳ ಸಂಖ್ಯೆ ಕಡಿಮೆ ಮಾಡಲು ಆದ್ಯತೆ ನೀಡಬೇಕು. ಮಾದಕವಸ್ತುಗಳಿಗೆ ಸಂಬಂಧಿಸಿದ ಜಾಲ ದೊಡ್ಡದಾಗಿ, ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಮೈಸೂರನ್ನು ಡ್ರಗ್‌್ಸ ಮುಕ್ತ ಮಾಡಬೇಕು. ಯಾವುದೇ ರೀತಿಯ ಅಪರಾಧಗಳಾದರೂ ಠಾಣಾಧಿಕಾರಿ ಗಮನಕ್ಕಿಲ್ಲದೆ ನಡೆಯಲು ಸಾಧ್ಯವಿಲ್ಲ. ಇನ್ನೂ ಮುಂದೆ ಅಪರಾಧಗಳಿಗೆ ಇನ್‌್ಸಪೆಕ್ಟರ್‌ಗಳು ಮತ್ತು ಸಬ್‌ಇನ್‌್ಸಪೆಕ್ಟರ್‌ಗಳನ್ನು ಹೊಣೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದು, ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿ, ವೃತ್ತಿಪರವಾಗಿ ನಡೆದುಕೊಂಡರೆ ಸಾಕು ಎನ್ನುವ ಸೂಚನೆ ನೀಡಿದ್ದೇನೆ ಎಂದರು.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಇನ್ನೂ ಮುಂದೆ ಈ ರೀತಿಯ ಕೃತ್ಯಗಳು ನಡೆದರೆ ಪೊಲೀಸ್ ಆಯುಕ್ತರನ್ನೇ ಹೊಣೆ ಮಾಡಲಾಗುವುದು. ಮಂಗಳೂರಿನಲ್ಲಿ ಆಯುಕ್ತರು ಮತ್ತು ಎಸ್‌ಪಿಯವರನ್ನು ಬದಲಾವಣೆ ಮಾಡಿದ ಬಳಿಕ ಅಲ್ಲಿ ಕೋಮುಗಲಭೆಗಳು ಕಡಿಮೆಯಾಗಿವೆ. ಇಬ್ಬರು ಅಧಿಕಾರಿಗಳು ವ್ಯವಸ್ಥೆಗೆ ಸುಧಾರಣೆ ತರಲು ಸಾಧ್ಯವಾದರೆ ಉಳಿದ ಕಡೆಗಳಲ್ಲಿ ಇದು ಏಕೆ ಸಾಧ್ಯವಿಲ್ಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ತಹಸೀಲ್ದಾರ್ ಮತ್ತು ಮೇಲ್ಪಟ್ಟ ಅಧಿಕಾರಿಗಳ ಬಳಿ ಇರುವ ಸಿವಿಲ್ ಪ್ರಕರಣಗಳನ್ನು ಕಾಲಮಿತಿಯಲ್ಲಿ ಪೂರ್ಣಗಳಿಸಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಶಾಲಾ, ಕಾಲೇಜು, ಹಾಸ್ಟೆಲ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಮೈಸೂರು ಜಿಲ್ಲೆಯಲ್ಲಿ ಎಸ್‌ಎಸ್ ಎಲ್ ಸಿ ಫಲಿತಾಂಶ ಇತ್ತೀಚೆಗೆ ಕಡಿಮೆಯಾಗಿದೆ. ಅದನ್ನು ಮತ್ತೆ 7ನೇ ಸ್ಥಾನದ ಒಳಗೆ ಸುಧಾರಿಸಲು ಸೂಚಿಸಲಾಗಿದೆ. ಅರಣ್ಯದಲ್ಲಿ ಹುಲಿಗಳ ಸಾವು ಸಂಭವಿಸಿದೆ. ವನ್ಯಜೀವಿಗಳು ಕಾಡಿನಲ್ಲಿ ನೀರು ಮತ್ತು ಮೇವು ಕಡಿಮೆಯಾಗಿರುವುದರಿಂದ ಆಹಾರಕ್ಕಾಗಿ ನಾಡಿಗೆ ಬರುತ್ತಿವೆ. ಲ್ಯಾಂಟೆನಾ ಹೆಚ್ಚು ಬೆಳೆದಿದೆ. ಇದನ್ನು ನಿಯಂತ್ರಿಸಿ, ಕಾಡಿನಲ್ಲಿ ವನ್ಯ ಜೀವಿಗಳಿಗೆ ಅಗತ್ಯ ನೀರು ಮತ್ತು ಮೇವು ದೊರಕಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಸಮಸ್ಯೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ರಾಜ್ಯಮಟ್ಟದಲ್ಲಿ ಮುಂದಿನ ವಾರ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದರು.



