ಮಡಿಕೇರಿ: ದಕ್ಷಿಣ ಭಾರತದ ಜೀವನಾಡಿಯಾದ ಕಾವೇರಿ ನದಿ, ಕರ್ನಾಟಕ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳ ಲಕ್ಷಾಂತರ ಜನರಿಗೆ ಕುಡಿಯುವ ನೀರು, ಕೃಷಿ ನೀರಾವರಿ, ಮತ್ತು ಜೀವೋಪಾಯದ ಮೂಲವಾಗಿದೆ. ಆದರೆ ಕಳೆದ ಕೆಲವು ದಶಕಗಳಲ್ಲಿ ನದಿಯ ಸ್ಥಿತಿ ಅತ್ಯಂತ ಗಂಭೀರವಾಗಿ ಹದಗೆಟ್ಟಿದ್ದು, ತೀವ್ರ ಕಲುಷಿತಗೊಂಡು ಕುಡಿಯಲು ಯೋಗ್ಯವಲ್ಲ,ಶುದ್ಧ ನೀರಿನ ಲಭ್ಯತೆ ಹಾಗೂ ಪರಿಸರ ಸಮತೋಲನ ಎರಡಕ್ಕೂ ಭಾರೀ ಧಕ್ಕೆಯಾಗಿದೆ.
ನದಿಯ ತೀರ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಕೈಗಾರಿಕೆಗಳು ಮತ್ತು ನಗರ ಪ್ರದೇಶಗಳಿಂದ ನೇರವಾಗಿ ನದಿಗೆ ಹರಿಯುತ್ತಿರುವ ರಾಸಾಯನಿಕ ತ್ಯಾಜ್ಯ, ಪ್ಲಾಸ್ಟಿಕ್, ಮತ್ತು ಒಳಚರಂಡಿ ನೀರು ನದಿಯ ಜೀವವೈವಿಧ್ಯವನ್ನು ಹಾಳುಮಾಡಿದೆ. ವಿಶೇಷವಾಗಿ ಕೊಡಗು,ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರ ನದಿ ಹರಿಯುವ ಪ್ರದೇಶಗಳಲ್ಲಿ ನದಿಯ ನೀರಿನ ಗುಣಮಟ್ಟ ಕುಸಿತಗೊಂಡು, ಸೇವನೆಗೆ ನದಿ ನೀರು ಬಳಕೆ ಮಾಡುವ ಬೆಂಗಳೂರು ನಗರ, ಮೈಸೂರು ಮತ್ತು ಇತರೆ ಜಿಲ್ಲೆಗಳ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ.
ಇದಲ್ಲದೆ, ಪ್ರತಿವರ್ಷ ಮಳೆಗಾಲದ ನಂತರ ನದಿಯ ಹಾಸಿನಲ್ಲಿ ಅತಿಯಾದ ಮಣ್ಣು (ಸಿಲ್ಟ್) ಜಮಾವಣೆ ಸಂಭವಿಸುತ್ತಿದ್ದು, ನೀರಿನ ಹರಿವು ಕುಂಠಿತವಾಗುತ್ತದೆ ಹಾಗೂ ಪ್ರವಾಹದ ಅಪಾಯ ಹೆಚ್ಚುತ್ತಿದೆ. ಈ ಸಿಲ್ಟ್ ತೆರವು ಕಾರ್ಯ (desilting) ಕೈಗೊಳ್ಳದ ಕಾರಣ ನದಿಯ ನೈಸರ್ಗಿಕ ಹರಿವು ಹದಗೆಟ್ಟು, ಜಲಜೀವಿಗಳ ವಾಸಸ್ಥಾನ ನಾಶವಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ:
- ನದಿಗೆ ಹರಿಯುವ ಕೈಗಾರಿಕಾ ಮತ್ತು ನಗರ ಒಳಚರಂಡಿ ನೀರಿನ ಶುದ್ಧೀಕರಣಕ್ಕಾಗಿ ಆಧುನಿಕ ಶುದ್ಧೀಕರಣ ಘಟಕಗಳು (STPs) ಸ್ಥಾಪನೆ.
- ಕಾವೇರಿ ಸ್ವಚ್ಛತೆಗೆ “ನಮಾಮಿ ಕಾವೇರಿ” ಯೋಜನೆ ರೂಪಿಸಿ, ಕಾವೇರಿ ನದಿ ಶುದ್ಧೀಕರಣ, ತ್ಯಾಜ್ಯ ನಿರ್ವಹಣೆ ಮತ್ತು ನದಿ ತೀರ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುವುದು.
- ನದಿಯ ಹಾಸಿನಲ್ಲಿ ಜಮಾದ ಮಣ್ಣಿನ (ಸಿಲ್ಟ್) ನಿಯಮಿತ ತೆರವು ಕಾರ್ಯ ಕೈಗೊಳ್ಳಲು ಸರ್ಕಾರದ ಸಂಯುಕ್ತ ಯೋಜನೆ.
- ನದಿಯ ತೀರ ಪ್ರದೇಶಗಳಲ್ಲಿ ಹಸಿರು ಬಫರ್ ವಲಯ ನಿರ್ಮಿಸಿ ಮರ ನೆಡುವ ಕಾರ್ಯಕ್ರಮ.
- ಜನಜಾಗೃತಿ ಕಾರ್ಯಕ್ರಮಗಳ ಮೂಲಕ ನದಿಯ ತೀರ ಪ್ರದೇಶಗಳಲ್ಲಿ ತ್ಯಾಜ್ಯ ವಿಸರ್ಜನೆ ತಡೆಯುವ ಕ್ರಮಗಳು.
- ಪರಿಸರ ತಜ್ಞರು, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ನದಿ ಆರೋಗ್ಯ ಪರಿವೀಕ್ಷಣಾ ಸಮಿತಿ (River Health Monitoring Committee) ರಚನೆ.
- ಮುಂಬರುವ ಬಜೆಟ್ ಮಂಡನೆ ವೇಳೆ ರಾಜ್ಯದಲ್ಲಿ ಕಾವೇರಿ ಮತ್ತು ಉಪನದಿಗಳ ಶುದ್ಧಿಕರಣಕ್ಕೆ ವಿಶೇಷ ಅನುದಾನ ಕಲ್ಪಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತೇವೆ.
ಈ ಕ್ರಮಗಳು ಕೈಗೊಳ್ಳುವ ಮೂಲಕ ಕಾವೇರಿ ನದಿ ಪುನಃ ಶುದ್ಧವಾಗಲು, ಜಲಮೂಲಗಳು ಜೀವಂತವಾಗಲು ಮತ್ತು ಮುಂದಿನ ಪೀಳಿಗೆಯೂ ಅದರ ಪ್ರಯೋಜನವನ್ನು ಅನುಭವಿಸಲು ಸಾಧ್ಯವಾಗುತ್ತದೆ
ಆದ್ದರಿಂದ ಸರ್ಕಾರ ತಡಮಾಡದೆ ಆಸಕ್ತಿ ಹೊತ್ತು ಪರಿಣಾಮಕಾರಿ ಮಹತ್ವದ ಕಾರ್ಯ ರೂಪಕ್ಕೆ ತರಬೇಕು ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.



