ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ನಡೆಸಲ್ಪಡುವ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ತಿರುಗಾಟದ ಆರಂಭೋತ್ಸವದಂದು ಏಳನೇ ಮೇಳದ ಪಾದಾರ್ಪಣೆ ನ.16 ರಂದು ನಡೆಯಲಿದೆ. ಈ ಕುರಿತು ಮಂಗಳೂರು ಪ್ರೆಸ್‌ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಮಾಹಿತಿ ನೀಡಿದರು.
ನ.15 ರಂದು ಸಂಜೆ 3 ಗಂಟೆಗೆ ಎಂಟುಸ್ತಬ್ಧಚಿತ್ರಗಳಲ್ಲಿ ಕಟೀಲಿನ ಏಳೂ ಮೇಳಗಳ ದೇವರು, ತೊಟ್ಟಿಲು, ಚಿನ್ನ ಬೆಳ್ಳಿಗಳ ಕಿರೀಟ ಇತ್ಯಾದಿ ಪರಿಕರಗಳನ್ನು ವೈಭವದ ಮೆರವಣಿಗೆಯಲ್ಲಿ ಬಜಪೆಯಿಂದ ಕಟೀಲಿಗೆ ತಂದು ದೇವರಿಗೆ ಒಪ್ಪಿಸಲಾಗುವುದು. ಏಳನೇ ಮೇಳಕ್ಕೆ ಭಕ್ತರು ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ನೀಡಿರುವ ದೇವರ ಕಿರೀಟಗಳು, ತೊಟ್ಟಿಲು. ಚಿನ್ನ ಬೆಳ್ಳಿಗಳ ಆಯುಧ, ಆಭರಣಗಳು ಸೇರಿವೆ ಎಂದರು.



