ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಗ್ರಾಮ ಪಂಚಾಯ್ತಿ ಕಾರ್ಯಾಲಯಗಳು ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕೇಂದ್ರಗಳಾಗಿದ್ದು ಚುನಾಯಿತ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ದೊಡ್ಡೇಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಗ್ರಾಮ ಪಂಚಾಯತಿ ನೂತನ ಕಟ್ಟಡವನ್ನು ಉದ್ಘಾಟಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಅಹವಾಲು ಆಲಿಸಬೇಕೆಂದು ಸಲಹೆ ನೀಡಿದರು.
ಜನರ ಸಾರ್ವಜನಿಕ ಸಂಕಷ್ಠ ಹಾಗೂ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಕರ್ತವ್ಯವಾಗಿದ್ದು ಅದನ್ನು ಅರಿತು ಕಾರ್ಯ ನಿರ್ವಹಿಸಬೇಕೆಂದ ಶಾಸಕರು ನಿಮ್ಮ ಹಂತದಲ್ಲಿ ಮಾಡಲಾಗದ ಕೆಲಸಗಳಿದ್ದರೆ ಅದನ್ನು ನನ್ನ ಗಮನಕ್ಕೆ ತರಬೇಕೆಂದರು.
ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಮೈಸೂರು ಜಿಲ್ಲೆಯಲ್ಲಿಯೆ ಮೊದಲ ಬಾರಿಗೆ ಕ್ಷೇತ್ರದ ದೊಡ್ಡೇಕೊಪ್ಪಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ತಲಾ ಒಬ್ಬರಿಗೆ ಹಕ್ಕು ಪತ್ರಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿದ್ದು ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ ಅರ್ಹರಿಗೆಲ್ಲ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ 25 ಲಕ್ಷ ರೂಗಳ ವೆಚ್ಚದಲ್ಲಿ ಪಂಚಾಯ್ತಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಸರ್ವ ಸದಸ್ಯರ ಮನವಿಯ ಮೇರೆಗೆ ಮೇಲಂತಸ್ತಿನ ಸಭಾ ಕೊಠಡಿಗೆ ಅಗತ್ಯ ಅನುದಾನ ಕೊಡುವುದಾಗಿ ಪ್ರಕಟಿಸಿದ ಡಿ.ರವಿಶಂಕರ್ ಇದರ ಜತೆಗೆ ಗ್ರಾಮ ವಿಕಾಸ ಯೋಜನೆಯಡಿ 75 ಲಕ್ಷ, ಶಾಲಾ ಕೊಠಡಿ ನಿರ್ಮಾಣಕ್ಕೆ 27 ಮತ್ತು ಅಂಗನವಾಡಿ ಕಟ್ಟಡಕ್ಕೆ 18 ಲಕ್ಷ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮಾಂತರ ಪ್ರದೇಶದ ಜನತೆಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ನಮ್ಮ ಸರ್ಕಾರ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸ ಮಾಡುವವರಿಗೆ ತಮ್ಮ ಮನೆ ಮತ್ತು ನಿವೇಶನಗಳಿಗೆ ಸಂಬಂದಿಸಿದಂತೆ 11. B ಹಾಗೂ ಈ ಸ್ವತ್ತಿನ ಖಾತೆಯ ದಾಖಲಾತಿ ನೀಡಲು ನಿರ್ಧಾರ ಮಾಡಿದ್ದು ಮುಂದಿನ ತಿಂಗಳಿನಿಂದ ಈ ಕೆಲಸ ಆರಂಭವಾಗಲಿದೆಯೆಂದು ನುಡಿದರು.
ನಮ್ಮ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ 968 ಮಂದಿಗೆ ಹಕ್ಕು ಪತ್ರಗಳನ್ನು ನೀಡಲಿದ್ದು ಇದು ಜಿಲ್ಲೆಯಲ್ಲಿಯೆ ಅತ್ಯಧಿಕವಾಗಿದ್ದು ಇದರೊಂದಿಗೆ ಜನರ ಅನುಕೂಲಕ್ಕೆ ಮತ್ತಷ್ಠು ಅಭಿವೃದ್ದಿ ಕೆಲಸಗಳನ್ನು ಮಾಡಲು ಕಾರ್ಯ ಯೋಜನೆ ಹಮ್ಮಿಕೊಂಡಿದ್ದೇನೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮನೆ ಮತ್ತು ನಿವೇಶನಗಳ ಹಕ್ಕು ಪತ್ರ, ವಿಧವಾ ಮತ್ತು ವೃದ್ದಾಪ್ಯ ವೇತನಗಳ ಅದೇಶ ಪತ್ರಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯ್ತಿ ಕಚೇರಿಯ ನಿರ್ಮಾಣಕ್ಕೆ ಸಹಕಾರ ನೀಡಿದ ಶಾಸಕ ಡಿ.ರವಿಶಂಕರ್ ಅವರನ್ನು ಸದಸ್ಯರಾದ ಕೆ.ಪಿ.ಜಗದೀಶ್, ಮಾರ್ಕ್ ಮಹದೇವ್ ಸನ್ಮಾನಿಸಿ ಗೌರವಿಸಿದರು.
ಗ್ರಾಪಂ ಅಧ್ಯಕ್ಷೆ ಭಾಗ್ಯಕರೀಗೌಡ, ಉಪಾಧ್ಯಕ್ಷೆ ಮಹದೇವಮ್ಮಸಿದ್ದಾರ್ಥ, ಸದಸ್ಯರಾದ ಕೆ.ಪಿ.ಜಗದೀಶ್, ಸಾವಿತ್ರಮ್ಮಬಸವರಾಜು, ಕೆ.ಕುಮಾರ್, ಕೃಷ್ಣ, ಕಾವ್ಯರಾಜು, ನಂಜುಂಡ, ಕೆ.ಎಸ್.ಶೇಖರ್, ಸುನೀತಾರಾಮೇಗೌಡ, ಸುಮಾರಾಜೇಶ್, ರಾಮನಾಯಕ, ಯೋಗೀಶ್, ರಾಜೇಶ್ವರಿಬಲರಾಮೇಗೌಡ, ಪಲ್ಲವಿರಾಮಲಿಂಗ, ಲಕ್ಷ್ಮೀರೇವಣ್ಣ, ಮಾರ್ಕ್ ಮಹದೇವ, ಸವಿತಾಸ್ವಾಮೀಗೌಡ, ಶ್ವೇತಾರವಿ, ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಇಒ ವಿ.ಪಿ.ಕುಲದೀಪ್, ಪಿಡಿಒ ಎಸ್.ಜೆ.ರಮೇಶ್, ಕಾರ್ಯದರ್ಶಿ ಸೋಮಶೇಖರ್, ಎಸ್ ಡಿಎ ಕೆ.ಗಣೇಶ್, ಬಿಲ್ ಕಲೆಕ್ಟರ್ ಮಹೇಶ್ ಮತ್ತಿತರರು ಇದ್ದರು.



