Saturday, November 15, 2025
Google search engine

Homeರಾಜ್ಯಸುದ್ದಿಜಾಲಮುಧೋಳದಲ್ಲಿ ರೈತರ ಹೋರಾಟ ಸುಖಾಂತ್ಯ: ರಿಕವರಿ ಪರಿಗಣಿಸದೆ ಟನ್ ಕಬ್ಬಿಗೆ 3300 ರೂ. ದರಕ್ಕೆ ಒಪ್ಪಿಗೆ.

ಮುಧೋಳದಲ್ಲಿ ರೈತರ ಹೋರಾಟ ಸುಖಾಂತ್ಯ: ರಿಕವರಿ ಪರಿಗಣಿಸದೆ ಟನ್ ಕಬ್ಬಿಗೆ 3300 ರೂ. ದರಕ್ಕೆ ಒಪ್ಪಿಗೆ.

ವರದಿ :ಸ್ಟೀಫನ್ ಜೇಮ್ಸ್

ಬಾಗಲಕೋಟೆಯ ಮುಧೋಳ ಕಬ್ಬು ಬೆಳೆಗಾರರ ಹೋರಾಟ ಸುಖಾಂತ್ಯ ಕಂಡಿದೆ. ಉಸ್ತುವಾರಿ ಸಚಿವ ಶಿವಾನಂದ ಪಾಟಿಲ್, ಡಿಸಿ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ ರಿಕವರಿ ಪರಿಗಣಿಸದೆ 3300 ರೂ. ನೀಡಲು ಒಪ್ಪಿವೆ. ಹೀಗಾಗಿ ರೈತರು ಅಲ್ಪ ಸಮಾಧಾನದಿಂದ ಹೋರಾಟ ಕೈಬಿಟ್ಟಿದ್ದಾರೆ.

ಮುಧೋಳ  ರೈತರ ಹೋರಾಟ  ಕೊನೆಗೂ ಸುಖಾಂತ್ಯ ಕಂಡಿದೆ. ಪ್ರತಿಭಟನೆ, ಆಕ್ರೋಶ, ಕಿಚ್ಚಿನ ಬಳಿಕ ಶುಕ್ರವಾರ ಉಸ್ತುವಾರಿ ಸಚಿವ ಶಿವಾನಂದ ಪಾಟಿಲ್, ಡಿಸಿ ಮಧ್ಯಸ್ಥಿಕೆಯಲ್ಲಿ ಸಭೆ ನಡೆಯಿತು. ಈ ವೇಳೆ ಕಬ್ಬಿನ ರಿಕವರಿ ರೇಟ್​ ಪರಿಗಣಿಸದೆ, ಪ್ರತಿ ಟನ್​ಗೆ 3,300 ರೂಪಾಯಿ ನೀಡಬೇಕೆಂಬ ರೈತರ ಬೇಡಿಕೆಗೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಕೊಂಡರು. ಹಾಗೆ, ಬಾಕಿ ಹಣ ಪಾವತಿಗೂ 4 ಸಕ್ಕರೆ ಕಾರ್ಖಾನೆಗಳು ಸಮ್ಮತಿ ನೀಡಿದವು.

ಪ್ರತಿ ಟನ್​​ ಕಬ್ಬಿಗೆ ಫ್ಯಾಕ್ಟರಿಯವರು 3,250 ರೂಪಾಯಿ ನೀಡಲಿ. ನಂತರ ಸರ್ಕಾರ 50 ರೂಪಾಯಿ ಕೊಡಲಿ ಎಂದು ರೈತರು ಪಟ್ಟು ಹಿಡಿದಿದ್ದರು. ಆದರೆ, ಇದಕ್ಕೆ ಸಕ್ಕರೆ ಕಾರ್ಖಾನೆಗಳು ಒಪ್ಪಲಿಲ್ಲ. ಹೀಗಾಗಿ ಮೊದಲ ಕಂತಿನಲ್ಲಿ ಫ್ಯಾಕ್ಟರಿಯವರು 3,200 ರೂಪಾಯಿ ನೀಡಲಿದ್ದು, ಆ ಬಳಿಕ 50 ರೂಪಾಯಿ ಹಾಗೂ ಸರ್ಕಾರದ 50 ರೂಪಾಯಿ ಸಿಗಲಿದೆ. ಹೀಗಾಗಿ ಅಲ್ಪ ಸಮಾಧಾನದಲ್ಲೇ ರೈತರು ಇದಕ್ಕೆ ಒಪ್ಪಿ, ಹೋರಾಟ ಕೈಬಿಟ್ಟಿದ್ದಾರೆ.

ಸರಕಾರ ರಿಕವರಿ ಆಧಾರದ ಮೇಲೆ ಘೋಷಿಸಿದ ಬೆಲೆ ಒಪ್ಪದ ರೈತರು ಮೊದಲು ಟನ್ ಗೆ 3,500 ರೂ. ಬೇಕೆಂದು ಪಟ್ಟು ಹಿಡಿದಿದ್ದರು. ನಂತರ ಅದು ಮೇಲಿಂದ ಮೇಲೆ ಸಭೆ ಬಳಿಕ ಸರಕಾರ ಘೋಷಿಸಿದ 3,300 ರೂ.ಗೆ ಬಂದು ತಲುಪಿತು. ಆದರೆ ರೈತರು ಇದರಲ್ಲಿ ರಿಕವರಿ, ಎಫ್​ಆರ್​​ಪಿ ಪರಿಗಣಿಸುವಂತಿಲ್ಲ ಎಂದು ಷರತ್ತು ಹಾಕಿದ್ದರು. 3,300 ರೂ. ಕೊಡಿ ಆದರೆ, ಮೊದಲ ಕಂತು 3250 ರೂ. ಕೊಡಿ ನಂತರ ಸರಕಾರ ಎರಡನೇ ಕಂತು 50 ರೂ. ಕೊಡಲಿ. ಒಟ್ಟು ಏಕರೂಪ ಬೆಲೆ 3,300 ರೂ. ಎಂದಿದ್ದರು. ಆದರೆ ಕಾರ್ಖಾನೆ ಮಾಲೀಕರು ಮೊದಲ ಕಂತು 3,300 ರೂ, ನಂತರ ಕಾರ್ಖಾನೆ ಹಾಗೂ ಸರಕಾರ ಸೇರಿ 100 ರೂ. ಕೊಡುವುದಾಗಿ ಪಟ್ಟು ಹಿಡಿದಿದ್ದರು. ಇದಕ್ಕೆ ಒಪ್ಪದ ಹಿನ್ನೆಲೆ ಕಳೆದ ನಾಲ್ಕೈದು ದಿನದಿಂದ ಹಗ್ಗಜಗ್ಗಾಟ ಜೋರಾಗಿತ್ತು. ಮೇಲಿಂದ ಮೇಲೆ‌ ನಡೆದ ಸಭೆಗಳು ವಿಫಲವಾಗಿದ್ದವು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ತೀವ್ರ ಸ್ವರೂಪ ಪಡೆದಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪವನ್ನೂ ತಾಳಿತ್ತು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಲು ಮುಂದಾದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿತ್ತು. ಐದಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಕಾರ್ಖಾನೆ ಆವರಣದಲ್ಲಿ ನಿಲ್ಲಿಸಿದ್ದ ನೂರಾರು ಟ್ರ್ಯಾಕ್ಟರ್‌ಗಳ ಪೈಕಿ 40-50 ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಸದ್ಯ ಸಂಧಾನ ಯಶಸ್ವಿಯಾಗಿದ್ದು, ಎಲ್ಲವೂ ತಣ್ಣಗಾದಂತಾಗಿದೆ.

ಏತನ್ಮಧ್ಯೆ, ಉತ್ತರ ಕರ್ನಾಟಕದಲ್ಲಿ ಎದ್ದಿರುವ ಕಬ್ಬಿನ ಕಿಚ್ಚಿನ‌ ನಡುವೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಿದ್ದತೆ ಆರಂಭವಾಗಿದೆ. ಡಿಸೆಂಬರ್ 8ರಿಂದ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದ್ದು, ಡಿಸಿ ನೇತೃತ್ವದಲ್ಲಿ ಸಭೆ ನಡೆಸಿ, ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

RELATED ARTICLES
- Advertisment -
Google search engine

Most Popular