ಬಾಗಲಕೋಟೆ: ಇಲಕಲ್ಲ ಡಾ.ಮಹಾಂತ ಸ್ವಾಮಿಗಳ ಹುಟ್ಟುಹಬ್ಬದ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿದರು.
ಇಲಕಲ್ಲ ವಿಜಯ ಮಹಾಂತೇಶ ಮಹಾವಿದ್ಯಾಲಯದ ಆವರಣದಿಂದ ಹೊರಟ ಜಾಗೃತಿ ಜಾಥಾ ಕಂಠಿವೃತ್ತ ಮಾರ್ಗವಾಗಿ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಮೂಲಕ ವಿಜಯ ಮಹಾಂತೇಶ್ವರ ಶಿವಯೋಗಿಗಳ ಅನುಭವ ಮಂಟಪದಲ್ಲಿ ಮುಕ್ತಾಯಗೊಂಡಿತು.
ಜಾಗೃತಿ ಜಾಥಾದಲ್ಲಿ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ 15 ಅಂಗ ಸಂಸ್ಥೆಗಳ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ವಿ.ಸಿ.ಅಕ್ಕಿ ಸ್ಮಾರಕ ಸಂಘದ ಜಿ.ಕೆ.ಮಲಗಂಡ ಪದವಿ ಪೂರ್ವ ಕಾಲೇಜು, ಚಿತ್ತರಗಿ ವಿಜಯ ಮಹಾಂತೇಶ್ವರ ಸೊಸೈಟಿಯ ಪ್ರೌಢಶಾಲೆ, ಎಸ್.ಎಮ್.ಆಂಗ್ಲ ಮಾದ್ಯಮ ಶಾಲೆ, ಬಸವ ಪಬ್ಲಿಕ್ ಶಾಲೆ, ಜೆ.ಸಿ.ಸ್ಕೂಲ್, ಪ್ರೇರಣ ಪ್ರೌಢಸಾಲೆ ಸೇರಿದಂತೆ 3000 ಕ್ಕೂ ಹೆಚ್ಚು ವಿದ್ಯಾಥಿಗಳು ಪಾಲ್ಗೊಂಡಿದ್ದರು.

ಜಾಥಾದುದ್ದಕ್ಕೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ, ಮಹಾಂತ ಜೋಳಿಗೆ ಊರಿಗೆಲ್ಲ ಹೋಳಿಗೆ, ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ ಸೇರಿದಂತೆ ಅನೇಕ ಘೋಷ ವ್ಯಾಕ್ಯಗಳನ್ನು ಕೂಗಿದರು. ಜಾಥಾದಲ್ಲಿ ಮಾವು ಅಭಿವೃದ್ಧಿ ಮಂಡಳಿಯ ಮಾಜಿ ನಿರ್ದೇಶಕ ಜಿ.ಎನ್.ಗೌಡರ, ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಎಸ್.ಶಂಕರಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಗಮನ ಸೆಳೆದ ಶಾಲಾ ಮಕ್ಕಳ ವೇಷಭೂಷಣ
ವ್ಯಸನಮುಕ್ತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾದಲ್ಲಿ ವಿಜಯ ಮಹಾಂತೇಶ ಶಿವಯೋಗಿಗಳು, ಡಾ.ಮಹಾಂತ ಶಿವಯೋಗಿಗಳು ಹಾಗೂ ಶಂಕರ ಗುರುಮಹಾಂತ ಶ್ರೀಗಳ ವೇಷ ಭೂಷಣ ಧರಿಸಿ ತೆರೆದ ವಾಹನದಲ್ಲಿ ಸಂಚರಿಸಿದ್ದು, ಎಲ್ಲರ ಗಮನ ಸೆಳೆಯಿತು.
