ವರದಿ :ಸ್ಟೀಫನ್ ಜೇಮ್ಸ್.
ವಿಧಾನಮಂಡಲ ಚಳಿಗಾಲದ ಅಧಿವೇಶನ|ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ:-ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಬೆಳಗಾವಿ: ಇಲ್ಲಿ ಡಿ.8ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ, ವಾರದ ಮಧ್ಯದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡಲಾಗುವುದು. ಈ ಭಾಗದ ಶಾಸಕರು ಧ್ವನಿ ಎತ್ತಿ, ಸರ್ಕಾರದಿಂದ ಉತ್ತರ ಪಡೆಯಲು ಪ್ರಯತ್ನಿಸಬೇಕು’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕೈಗೊಂಡಿರುವ ಅಧಿವೇಶನದ ಸಿದ್ಧತೆಗಳನ್ನು ಬುಧವಾರ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಇಡೀ ರಾಜ್ಯದ ಸಮಸ್ಯೆಗಳ ಕುರಿತಾಗಿ ಚರ್ಚಿಸಲು ಅಧಿವೇಶನ ನಡೆಸಲಾಗುತ್ತದೆ. ಅದರಲ್ಲೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತಾಗಿಯೇ ಚರ್ಚೆಗೆ ಅವಕಾಶ ನೀಡಿದಾಗ, ಈ ಭಾಗದ ಸಮಸ್ಯೆಗಳ ಕುರಿತು ಧ್ವನಿ ಎತ್ತಿ ಬೇಡಿಕೆ ಈಡೇರಿಸಿಕೊಳ್ಳುವುದು ಆಯಾ ಶಾಸಕರ ಜವಾಬ್ದಾರಿ’ ಎಂದರು.
‘ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ನೀಡಬೇಕಿರುವ ಸಮಯದ ಕುರಿತು ಬಿಜೆನೆಸ್ ಅಡ್ಡೆಸರಿ ಕಮಿಟಿ(ಬಿಎಸಿ) ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದು ಹೇಳಿದರು.
‘ಅಚ್ಚುಕಟ್ಟಾಗಿ ಅಧಿವೇಶನ ನಡೆಸಲು ತಯಾರಿ ಮಾಡಿಕೊಂಡಿದ್ದು, ವಿವಿಧ ಸಮಿತಿ ರಚಿಸಿದ್ದೇವೆ. ನಿತ್ಯ 500 ವಿದ್ಯಾರ್ಥಿಗಳಿಗೆ ಕಲಾಪ ವೀಕ್ಷಿಸಲು ಅವಕಾಶ ಕೊಡಲಾಗುವುದು. ಈ ಹಿಂದೆ ಇದ್ದ ಕಲಾಪ ವೀಕ್ಷಣೆ ಸಮಯವನ್ನು 10 ನಿಮಿಷದಿಂದ 20ರಿಂದ 25 ನಿಮಿಷಕ್ಕೆ ಹೆಚ್ಚಿಸಲಾಗಿದೆ. ಆದರೆ, ಕಲಾಪ ವೀಕ್ಷಣೆಗೆ ವಿದ್ಯಾರ್ಥಿಗಳು ಆಗಮಿಸುವ ಒಂದು ವಾರ ಮುಂಚೆಯೇ ಅನುಮತಿ ಪಡೆಯಬೇಕು’ ಎಂದು ತಿಳಿಸಿದರು. ‘ಸಂಸದೀಯ ವ್ಯವಸ್ಥೆ ಕುರಿತು ಅರಿವು ಮೂಡಿಸಲು ವಿವಿಧ ವಿಶ್ವವಿದ್ಯಾಲಯಗಳ ಆಯ್ದ 30 ವಿದ್ಯಾರ್ಥಿಗಳಿಗೆ ಇಡೀದಿನ ಕಲಾಪ ವೀಕ್ಷಣೆಗೆ ಅವಕಾಶ ನೀಡಲು ತೀರ್ಮಾನಿಸಿದ್ದೇವೆ. ಅಲ್ಲದೆ, ಕ್ರೀಡಾಪಟುಗಳು, ಕಾರ್ಮಿಕರು, ಪೌರ ಕಾರ್ಮಿಕರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿ ವಿವಿಧ ವರ್ಗದವರಿಗೆ ಕಲಾಪ ವೀಕ್ಷಣೆಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆ ಮಾಡುತ್ತೇವೆ. ಕಲಾಪ ವೀಕ್ಷಿಸಲು ಬರುವವರಿಗೆ ಶಟಲ್ ಬಸ್ ವ್ಯವಸ್ಥೆ ಮಾಡುತ್ತೇವೆ’ ಎಂದರು.
‘ಕಲಾಪ ವೀಕ್ಷಣೆಗೆ ಬರುವ ವಿದ್ಯಾರ್ಥಿಗಳಿಗೆ ಮೋಟಿವೇಷನ್ ಕ್ಲಾಸ್ ನಡೆಸುವ ಜತೆಗೆ, ಆಸಕ್ತ ಕ್ಷೇತ್ರಗಳ ಬಗ್ಗೆ ತರಬೇತಿ ನೀಡುತ್ತೇವೆ. ಸದನದಲ್ಲಿ ಚರ್ಚಿಸಬೇಕಿರುವ ವಿಷಯಗಳ ಕುರಿತು ಬಿಎಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಭರಮಗೌಡ(ರಾಜು) ಕಾಗೆ ಹೇಳಿಕೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದು ತಪ್ಪು. ಅಂಥ ಬೇಡಿಕೆಗಳನ್ನು ಮಂಡಿಸಬಾರದು. ಒಂದುವೇಳೆ ಮಂಡಿಸಿದರೆ ಈ ವಿಷಯದ ಚರ್ಚೆಗೆ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂದು ಬಿಎಸಿ ನಿರ್ಧರಿಸುವುದು’ ಎಂದರು.
‘ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಸದನಕ್ಕೆ ಹಾಜರಾಗುವವರ ಪ್ರಮಾಣ ಕ್ರಮೇಣವಾಗಿ ಸುಧಾರಣೆಯಾಗುತ್ತಿದೆ. ಕಳೆದ ವರ್ಷದ ಅಧಿವೇಶನವೂ ಯಶಸ್ವಿಯಾಗಿದೆ. ಬೇರೆ ರಾಜ್ಯಗಳಲ್ಲಿ ನಡೆಯುವ ಅಧಿವೇಶನಗಳನ್ನು ಗಮನಿಸಿದರೆ, ಕರ್ನಾಟಕದಲ್ಲಿನ ಅಧಿವೇಶನಗಳಲ್ಲಿನ ಹಾಜರಾತಿ ಪ್ರಮಾಣ ಉತ್ತಮವಾಗಿದೆ.
ಸದನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಸರ್ಕಾರ ಜಾರಿಗೆ ತರಬೇಕು’ ಎಂದು ಹೇಳಿದರು. ‘ಆಡಳಿತ ಮತ್ತು ವಿರೋಧ ಪಕ್ಷಗಳ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಅಧಿವೇಶನ ನಡೆಸುತ್ತೇವೆ’ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಕಳೆದ ವರ್ಷದ ಅಧಿವೇಶನದಲ್ಲಿ ಪ್ರತಿಭಟನೆಗಳ ಸಂಖ್ಯೆ ತಗ್ಗಿಸಲು ಕ್ರಮ ವಹಿಸಿದ್ದೆವು. ಈ ಬಾರಿಯೂ ಹಾಗೆಯೇ ಪ್ರಯತ್ನಿಸಲಾಗುವುದು. ವಿವಿಧ ವರ್ಗಗಳು ಮತ್ತು ಇಲಾಖೆಗಳ ಸಮಸ್ಯೆಗಳ ಬಗ್ಗೆ ಮುಂಚಿತವಾಗಿಯೇ ಚರ್ಚಿಸಿ, ಪ್ರತಿಭಟನೆ ಸಂಖ್ಯೆ ತಗ್ಗಿಸಲು ಯತ್ನಿಸಲಾಗುವುದು’ ಎಂದರು.
‘ಸದನದ ನಿಯಮಾವಳಿ ಪ್ರಕಾರವೇ ಚರ್ಚೆಗೆ ಅವಕಾಶ ಕೊಡಲಾಗುವುದು. ಕಳೆದ ವರ್ಷ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಗಳಿಗೆ ಆಯಾ ಸಚಿವರು ಹೋಗಿ ಅಹವಾಲು ಆಲಿಸಿದ್ದರು. ಈ ಬಾರಿಯೂ ಅದೇ ಮಾದರಿಯಲ್ಲಿ ಕ್ರಮ ವಹಿಸಲಾಗುವುದು’ ಎಂದರು.
‘ಸುವರ್ಣ ವಿಧಾನಸೌಧದೊಳಗಿನ ಎಲ್ಲ ಕೊಠಡಿಗಳು ಒಮ್ಮೆಯೂ ಬಣ್ಣ ಕಂಡಿಲ್ಲ. ಇದಕ್ಕೆ ಅನುದಾನ ಕೊಡುತ್ತೀರಾ’ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು’ ಎಂದರು.



