Thursday, November 20, 2025
Google search engine

Homeರಾಜ್ಯಸುದ್ದಿಜಾಲಬೆಳಗಾವಿ ಅಧಿವೇಶನ। ಯಾವುದೇ ಲೋಪಕ್ಕೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಿ: ಖಾದ‌ರ್.

ಬೆಳಗಾವಿ ಅಧಿವೇಶನ। ಯಾವುದೇ ಲೋಪಕ್ಕೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಿ: ಖಾದ‌ರ್.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ‘ಈ ಸಲದ ವಿಧಾನಮಂಡಲ ಚಳಿಗಾಲ ಅಧಿವೇಶನದಲ್ಲಿ ಯಾವುದೇ ಲೋಪಕ್ಕೆ ಆಸ್ಪದ ನೀಡದಂತೆ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದ‌ರ್ ಸೂಚಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಅಧಿವೇಶನ ಪೂರ್ವಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಅಧಿವೇಶನ ವೇಳೆ ಎದುರಾಗುವ ಸಮಸ್ಯೆಗಳನ್ನು ತಕ್ಷಣವೇ ಸಂಬಂಧಿತರ ಗಮನಕ್ಕೆ ತಂದು ಪರಿಹರಿಸಬೇಕು. ದೂರಸಂಪರ್ಕ, ನೆಟ್‌ವರ್ಕ್‌ ಸಮಸ್ಯೆ ತಲೆದೋರದಂತೆ ನಿಗಾ ವಹಿಸಬೇಕು. ಪ್ರತಿಭಟನಕಾರರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ, ಮೂಲಸೌಕರ್ಯ ಒದಗಿಸಬೇಕು. ಜತೆಗೆ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಬೇಕು’ ಎಂದರು.
‘ಅಧಿವೇಶನಕ್ಕೆ ಸಂಬಂಧಿಸಿ ವಿತರಿಸುವ ಪಾಸ್‌ಗಳಲ್ಲಿ ಯಾವುದೇ ಗೊಂದಲವಾಗದಂತೆ ಕ್ರಮ ವಹಿಸಬೇಕು’ ಎಂದು ನಿರ್ದೇಶನ ಕೊಟ್ಟರು.
ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ‘ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು, ಸಚಿವಾಲಯಗಳ ಅಧಿಕಾರಿ, ಸಿಬ್ಬಂದಿ ಹಾಗೂ ಮಾರ್ಷಲ್‌ಗಳಿಗೆ ವಸತಿ, ಸಾರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಸಚಿವರು, ಶಾಸಕರು ತಂಗುವ ಹೋಟೆಲ್‌ಗಳಲ್ಲಿ ತಜ್ಞವೈದ್ಯರ ತಂಡ ನಿಯೋಜಿಸಬೇಕು. ಅಂತೆಯೇ, ಸುವರ್ಣ ವಿಧಾನಸೌಧದಲ್ಲೂ ಆಂಬುಲೆನ್ಸ್‌ನೊಂದಿಗೆ ವೈದ್ಯರ ತಂಡ ನಿಯೋಜಿಸಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಅಧಿವೇಶನದ ಯಶಸ್ಸಿಗಾಗಿ ಈ ಬಾರಿ 12 ಸಮಿತಿ ರಚಿಸಲಾಗಿದೆ’ ಎಂದರು.
ನಗರ ಪೋಲಿಸ್‌ ಕಮಿಷನ‌ರ್ ಭೂಷಣ ಬೊರಸೆ, ‘ಅಧಿವೇಶನ ವೇಳೆ ಭದ್ರತೆಗಾಗಿ ಬೇರೆ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಅವರಿಗೆ ವಸತಿ, ಊಟದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಆಸಿಫ್ ಸೇರ್, ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ವಿಧಾನ ಪರಿಷತ್‌ ಕಾರ್ಯದರ್ಶಿ ಮಹಾಲಕ್ಷ್ಮೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಹಾಜರಿದ್ದರು.
ನಂತರ ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣ, ಸೆಂಟ್ರಲ್ ಹಾಲ್, ಬ್ಯಾಂಕ್ವೆಟ್ ಹಾಲ್‌ಗೆ ಖಾದರ್ ಮತ್ತು ಹೊರಟ್ಟಿ ತೆರಳಿ ಸಿದ್ಧತೆ ಪರಿಶೀಲಿಸಿದರು.

‘ಸುವರ್ಣ ವಿಧಾನಸೌಧದಲ್ಲಿ ಸೂಕ್ತ ಭದ್ರತೆ ಕೈಗೊಳ್ಳುವ ಜತೆಗೆ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಧಿವೇಶನ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕು. ಕಳೆದ ಬಾರಿಯಂತೆ ಈ ಬಾರಿಯೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಸೌಧದ ಆವರಣದಲ್ಲಿ ಪ್ರತಿ ಶಾಸಕರಿಂದ ಸಸಿ ನೆಡಲು ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಖಾದ‌ರ್ ತಿಳಿಸಿದರು.

RELATED ARTICLES
- Advertisment -
Google search engine

Most Popular