ನವದೆಹಲಿ : ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ನಾಳೆಯಿಂದ ಮೂರು ದಿನ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಜೋಹಾನ್ಸ್‌ಬರ್ಗ್‌ನಲ್ಲಿ ನ.21-23 ರ ವರೆಗೆ ಜಿ20 ನಾಯಕರ ಶೃಂಗಸಭೆ ನಡೆಯಲಿದೆ. ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ, ವಿಪತ್ತು ಅಪಾಯ ಕಡಿತದಲ್ಲಿ ಜಿ20 ಕೊಡುಗೆ, ಹವಾಮಾನ ಬದಲಾವಣೆ ಮತ್ತು ನಿರ್ಣಾಯಕ ಖನಿಜಗಳು, ಕೃತಕ ಬುದ್ಧಿಮತ್ತೆಯ ಕುರಿತು ನಡೆಯುವ ಈ ಶೃಂಗಸಭೆಯ 3 ಅಧಿವೇಶನಗಳಲ್ಲಿ ಮೋದಿ ಮಾತನಾಡುವ ನಿರೀಕ್ಷೆಯಿದೆ.
ಕೆಲವು ನಾಯಕರೊಂದಿಗೆ ಪ್ರಧಾನಿ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ತನ್ನ ಬಿಳಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ, ಅಮೆರಿಕ ಶೃಂಗಸಭೆಯನ್ನು ಬಹಿಷ್ಕರಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಹೊತ್ತಿನಲ್ಲೇ, ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾ ಆಯೋಜಿಸುತ್ತಿರುವ 20ನೇ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ಭಾರತೀಯ ಅಧಿಕಾರಿಗಳೊಂದಿಗೆ ಅಮೆರಿಕದ ಸಹಾಯಕ ವ್ಯಾಪಾರ ಪ್ರತಿನಿಧಿ ಬ್ರೆಂಡನ್ ಲಿಂಚ್ ಮಾತುಕತೆ ನಡೆಸಿದ ನಂತರ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಗಳು ಪುನರಾರಂಭಗೊಂಡವು. ಜೈಶಂಕರ್ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ಇತ್ತೀಚಿನ ಅಮೆರಿಕ ಭೇಟಿಗಳಲ್ಲಿಯೂ ವ್ಯಾಪಾರ ಚರ್ಚೆಗಳು ನಡೆದಿವೆ.
ದಕ್ಷಿಣ ಆಫ್ರಿಕಾ 2024ರ ಡಿಸೆಂಬರ್ 1 ರಿಂದ ಈ ವರ್ಷದ ನವೆಂಬರ್ ವರೆಗೆ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು. ಅಧ್ಯಕ್ಷ ಸಿರಿಲ್ ರಾಮಾಫೋಸಾ ಈ ಹಿಂದೆ ಅಮೆರಿಕದ ಬಹಿಷ್ಕಾರವು ತಮಗೆ ನಷ್ಟವುಂಟು ಮಾಡಿದೆ ಎಂದು ಹೇಳಿಕೆ ನೀಡಿದ್ದರು.



