Thursday, November 20, 2025
Google search engine

Homeರಾಜ್ಯರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ವಹಿಸಿ : ಸಿಎಂಗೆ ಬೊಮ್ಮಾಯಿ ಪತ್ರ

ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ವಹಿಸಿ : ಸಿಎಂಗೆ ಬೊಮ್ಮಾಯಿ ಪತ್ರ

ಬೆಂಗಳೂರು : ಕಳೆದ ಎರಡು ವರ್ಷದಿಂದ ವಿಪರೀತ ಮಳೆಯಿಂದ ಹಲವಾರು ಬೆಳೆ ನಾಶವಾಗಿದ್ದು, ಬೆಳೆ ನಷ್ಟ ಸರ್ವೆಯಲ್ಲಿ ಲೋಪವಾಗಿದ್ದು, ಕೂಡಲೇ ರಾಜ್ಯಾದ್ಯಂತ ಇದನ್ನು ಸರಿಪಡಿಸಿ ನಷ್ಟ ಆದ ಎಲ್ಲ ರೈತರಿಗೆ ಬೆಳೆ ಪರಿಹಾರ ಕೊಡಬೇಕು. ಮತ್ತು ಇದಕ್ಕೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಕಳೆದ ಎರಡು ವರ್ಷ ವಿಪರೀತ ಮಳೆ ಬಿದ್ದು ರಾಜ್ಯದ ಬಹುತೇಕ ಬೆಳೆಗಳು ನಾಶವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ರೈತರಿಗೆ ಎರಡು ವರ್ಷವೂ ಕೂಡ ನಷ್ಟವಾಗಿದ್ದು ಮೆಕ್ಕೆಜೋಳ, ಸೊಯಾಬೀನ್, ಹೆಸರು, ಈರುಳ್ಳಿ ಬೆಳೆ ನಾಶವಾಗಿದೆ. ಕಳೆದ ವರ್ಷ ಮಳೆಯಿಂದ ನಷ್ಟವಾದ ಬೆಳೆಗೆ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ. ಮೊನ್ನೆ ತಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿಯನ್ನು ಸಲ್ಲಿಸಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಆದರೆ, ವಾಸ್ತವಾಂಶ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಬೆಳೆ ನಷ್ಟ ಪರಿಹಾರ ಸರ್ವೆ ಕಾರ್ಯ ಸಮರ್ಪಕವಾಗಿ ನ್ಯಾಯ ಸಮ್ಮತವಾಗಿ ನಡೆದಿರುವುದಿಲ್ಲ. ಕೃಷಿ, ಕಂದಾಯ ಮತ್ತು ಸಾಂಖಿಕ ಇಲಾಖೆ ಅಧಿಕಾರಿಗಳು ವ್ಯಾಪಕವಾಗಿ ರೈತರ ಜಮೀನಿನಲ್ಲಿ ಪರೀಕ್ಷೆ ಮಾಡದೇ ಸರಕಾರಕ್ಕೆ ವರದಿ ಸಲ್ಲಿಸಿರುತ್ತಾರೆ. ಇದರ ಪರಿಣಾಮವಾಗಿ ಹಲವಾರು ತಾಲೂಕುಗಳಲ್ಲಿ ಒಟ್ಟು ಬಿತ್ತನೆಯಾದ ಪ್ರದೇಶದ ಶೇ ಶೆ.10ರಷ್ಟು ಬೆಳೆ ನಾಶ ಆಗಿಲ್ಲ ಎನ್ನುವ ವರದಿ ಬಂದಿದೆ. ಇದು ಸತ್ಯಕ್ಕೆ ದೂರವಾಗಿರುವಂಥದ್ದು ಕೆಲವು ತಾಲೂಕುಗಳಲ್ಲಿ ನಷ್ಟವೇ ಆಗಿಲ್ಲ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಉದಾಹರಣೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಸಾಕಷ್ಟು ಬೆಳೆ ನಷ್ಟವಾಗಿದ್ದರೂ ನಷ್ಟವಾಗಿಲ್ಲ ಎಂದು ವರದಿ ನೀಡಿದ್ದಾರೆ. ರಾಜ್ಯಾದ್ಯಂತ ಇದನ್ನು ಕೂಡಲೇ ಸರಿಪಡಿಸಬೇಕು. ನಷ್ಟ ಆದ ಎಲ್ಲ ರೈತರಿಗೆ ಬೆಳೆ ಪರಿಹಾರ ಕೊಡಬೇಕು. ಮತ್ತು ಇದಕ್ಕೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೆಕ್ಕೆಜೋಳ ಖರೀದಿಗೆ ನಿರ್ದೇಶನ ನೀಡಿ :

ರಾಜ್ಯದಲ್ಲಿ ಮೆಕ್ಕೆ ಜೋಳ ಸುಮಾರು 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದು ಕಳೆದ ವರ್ಷ 54 ಲಕ್ಷ ಮೆಟ್ರಿಕ್ ಟನ್ ಬಂದಿದ್ದು, ಈ ವರ್ಷವೂ ಅಷ್ಟೇ ಉತ್ಪನ್ನ ಬರುವ ನಿರೀಕ್ಷೆ ಇದೆ. ಈ ವರ್ಷ ಮೆಕ್ಕೆಜೋಳದ ಬೆಲೆ ಸಂಪೂರ್ಣ ಕುಸಿದಿದೆ. ಅದು ಪ್ರತಿ ಕ್ವಿಂಟಾಲ್ ಗೆ 1600 ರೂ. ಗೆ ಇಳಿದಿರುವುದು ರೈತರಿಗೆ ಆಘಾತ ತಂದಿದೆ. ಕೇಂದ್ರ ಸರಕಾರ ಈಗಾಗಲೇ ಎಂಎಸ್ ಪಿ 2400 ರೂ. ಘೋಷಣೆ ಮಾಡಿದೆ. ರೈತರು ಇದರ ಮೇಲೆ ರಾಜ್ಯ ಸರಕಾರ ಕನಿಷ್ಠ 500 ರೂ. ಪ್ರತಿ ಕ್ವಿಂಟಾಲ್ ಗೆ ಕೊಡಬೇಕೆಂದು ಎಲ್ಲ ಜಿಲ್ಲೆಗಳಲ್ಲಿ ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಕೇಂದ್ರ ಸರಕಾರದ ನಿರ್ದೆಶನಕ್ಕೆ ಕಾಯದೇ ಮೆಕ್ಕೆ ಜೋಳ ಖರೀದಿಸಿ ಅದು ಹಾಳಾಗದೇ ಇರುವ ಬೆಳೆ ಇರುವುದರಿಂದ ಸೂಕ್ತ ಮಾರುಕಟ್ಟೆ ದರ ಹೆಚ್ಚಾದಾಗ ರಾಜ್ಯ ಸರಕಾರ ಮಾರಬಹುದು. ನಂತರ ಕೇಂದ್ರಕ್ಕೆ ವರದಿ ಕಳುಹಿಸಬಹುದು. ಈ ಬಗ್ಗೆ ಕೂಡಲೆ ಒಂದು ನಿರ್ಧಾರ ಮಾಡಿ ಖರೀದಿಗೆ ಸೂಕ್ತ ನಿರ್ದೇಶನ ನೀಡಲು ಅವರು ವಿನಂತಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular