ಮಂಡ್ಯ : ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮಗೊಳಿಸುವ ಸಂಬಂಧ ಇಲಾಖೆಯು ಜಾರಿಗೆ ತಂದಿರುವ ಕ್ರಿಯಾ ಯೋಜನೆಗಳನ್ನು ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ಚೆಲುವಯ್ಯ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ. ವಿ. ಶಂಕರೇಗೌಡ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆಂಗ್ಲಭಾಷ ಉಪನ್ಯಾಸಕರ ವೇದಿಕೆ ಆಯೋಜಿಸಿದ್ದ ಉಪನ್ಯಾಸಕರ ಶೈಕ್ಷಣಿಕ ಕಾರ್ಯಾಗಾರ ಹಾಗೂ ಆಂಗ್ಲ ಭಾಷಾ ವಿಷಯದ ಪ್ರಶ್ನೆ ಪತ್ರಿಕೆಯ ಕೈಪಿಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಪಿಯುಸಿ ಶಿಕ್ಷಣ ಪ್ರಮುಖ ಘಟ್ಟವಾಗಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ವೃದ್ಧಿ ಆಗುತ್ತಿದೆ. ಈ ವರ್ಷವೂ ವಿದ್ಯಾರ್ಥಿಗಳ ಫಲಿತಾಂಶ ವೃದ್ಧಿಗಾಗಿ ಉಪನ್ಯಾಸಕರು ನಿರಂತರವಾಗಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾದ ಬೋಧನೆ ಮತ್ತು ಅಭ್ಯಾಸಗಳನ್ನು ಮಾಡಿಸುವ ಮೂಲಕ ಉತ್ತಮ ಫಲಿತಾಂಶ ಬರುವಂತೆ ಕ್ರಮವಹಿಸುತ್ತಿರುವುದು ಪ್ರಸಂಶನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಎಲ್ಲಾ ವಿಷಯಗಳ ಉಪನ್ಯಾಸಕರು ತಮ್ಮ ವಿಷಯಗಳ ಹೆಸರಿನಲ್ಲಿ ವೇದಿಕೆಗಳನ್ನು ಸ್ಥಾಪಿಸಿಕೊಂಡು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಮಾರ್ಗದರ್ಶನ ಪರಿಕರಗಳನ್ನು ವಿತರಿಸುವ ಮೂಲಕ ವಿದ್ಯಾರ್ಥಿಗಳ ನೆರವಿಗೆ ಧಾವಿಸಿರುವುದು ಮೆಚ್ಚುಗೆಯ ವಿಷಯ ಎಂದು ಅಭಿಪ್ರಾಯಪಟ್ಟರು.
ದ್ವಿತೀಯ ಪಿಯುಸಿ ಫಲಿತಾಂಶದ ಪ್ರಗತಿಗಾಗಿ ಶೈಕ್ಷಣಿಕ ವರ್ಷದ ಆರಂಭದಿಂದಲೇ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಹಲವು ಯೋಜನೆಗಳನ್ನು ರೂಪಿಸಿದ್ದು ಅವುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಕೆಲಸದಲ್ಲಿ ಉಪನ್ಯಾಸಕರ ಪಾತ್ರ ಬಹುಮುಖ್ಯವಾಗಿದೆ ಎಂದ ಅವರು ಪರೀಕ್ಷಾ ದಿನಗಳು ಹತ್ತಿರವಾಗುತ್ತಿರುವುದರಿಂದ ಉಪನ್ಯಾಸಕರು ಪ್ರತಿಯೊಬ್ಬ ವಿದ್ಯಾರ್ಥಿಯ ಕಡೆಗೆ ತಮ್ಮ ಮಕ್ಕಳಂತೆ ಗಮನ ನೀಡುವ ಮೂಲಕ ಅವರ ಶೈಕ್ಷಣಿಕ ಜೀವನಕ್ಕೆ ಮಾರ್ಗದರ್ಶಕರಾಗಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವವರಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಸಂಖ್ಯೆ ಹೆಚ್ಚಿದ್ದು ಇವರುಗಳಿಗೆ ಆಂಗ್ಲ ಭಾಷೆ ಕಷ್ಟ ಸಾಧ್ಯವಾಗಿದೆ. ಅವರ ಫಲಿತಾಂಶ ವೃದ್ದಿಗಾಗಿ ಆಂಗ್ಲಭಾಷ ವೇದಿಕೆಯು ಹೊರತಂದಿರುವ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವ ಕೈಪಿಡಿ ಪುಸ್ತಕ ತುಂಬಾ ಉಪಯುಕ್ತವಾಗಿದ್ದು ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆದು ತಮ್ಮ ಶೈಕ್ಷಣಿಕ ಜೀವನವನ್ನು ಮುಂದುವರಿಸಬೇಕೆಂದು ಆಶಿಸಿದರು.
ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ. ಪೋಷಕರು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಮಕ್ಕಳಿಗೆ ಯಾವುದೇ ಒತ್ತಡವನ್ನು ನೀಡದೆ ಮನೆಗಳಲ್ಲಿ ಅಭ್ಯಾಸ ಮಾಡುವಂತಹ ಪೂರಕ ವಾತಾವರಣವನ್ನು ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು.

ಆಂಗ್ಲ ಭಾಷೆ ವಿಷಯದ ವೇದಿಕೆಯ ಅಧ್ಯಕ್ಷ ಎಸ್. ಸುದೀಪ್ ಕುಮಾರ್ ಮಾತನಾಡಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಆಂಗ್ಲಭಾಷೆಯ ಫಲಿತಾಂಶ ಮುಖ್ಯವಾಗಿದೆ. ಉಪನಿರ್ದೇಶಕರ ಮಾರ್ಗದರ್ಶನ ಹಾಗೂ ಎಲ್ಲ ಆಂಗ್ಲ ಭಾಷಾ ಉಪನ್ಯಾಸಕರ ಸಹಕಾರದೊಂದಿಗೆ 2009ರಲ್ಲಿ ಸ್ಥಾಪನೆಗೊಂಡ ಆಂಗ್ಲ ಭಾಷೆ ವೇದಿಕೆಯು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಷ್ಟ ಸಾಧ್ಯವಾಗಿರುವ ಆಂಗ್ಲ ಭಾಷೆಯ ಫಲಿತಾಂಶವನ್ನು ವೃದ್ಧಿಸುವುದಕ್ಕೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ನಿರಂತರವಾಗಿ ಮಕ್ಕಳು ಅಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ಯೋಜನೆಗಳನ್ನು ರೂಪಿಸಲಾಗಿದೆ ಎಂದು ವಿವರಿಸಿದರು.
ವೇದಿಕೆ ಗೌರವಾಧ್ಯಕ್ಷ ಹಾಗೂ ಪ್ರಾಂಶುಪಾಲ ಹನುಮಂತರಾಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ರಾಜ್ಯ ಸಂಪನ್ಮೂಲ ವ್ಯಕ್ತಿ ಭಾಗ್ಯಮ್ಮ, ವೇದಿಕೆಯ ಅಧ್ಯಕ್ಷ ಎಸ್. ಸುದೀಪ್ ಕುಮಾರ್, ಪದಾಧಿಕಾರಿಗಳಾದ ಕೆ.ಮಧು,ನರೇಂದ್ರಬಾಬು, ಜಾಯ್ ಜಾಸ್ಮಿನ್, ರಮೇಶ, ಪದ್ಮನಾಬ್, ಚಂದ್ರಶೇಖರ, ನೀರ ಜಾಕ್ಷ, ಶ್ರೀಕಂಠಯ್ಯ, ಲತಾ, ವೀಣಾ ,ಸೌಮ್ಯ ,ಕಲ್ಪನಾ ಸೇರಿದಂತೆ ಇತರರು ಹಾಜರಿದ್ದರು.



