ಉತ್ಸವ ಮೂರ್ತಿಯ ಗುಡಿಯಲ್ಲೇ ಇರಿಸಿ, ಅರ್ಚಕನನ್ನು ನೇಮಿಸುವಂತೆ ಒತ್ತಾಯ
ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ಗ್ರಾಮದೇವತೆ ಶ್ರೀ ದಿಡ್ಡಿಯಮ್ಮ ದೇವಸ್ಥಾನ ಅರ್ಚಕ ನೇಮಕ ಪ್ರಕ್ರಿಯೆ ಸೇರಿದಂತೆ ಸಮಸ್ಯೆಯು ತಿಂಗಳುಗಳು ಕಳೆದರು ಬಗೆಹರಿಯದ ಹಿನ್ನಲೆ ಶನಿವಾರ ಗ್ರಾಮಸ್ಥರು ದೇವಸ್ಥಾನ ಮುಂಭಾಗ ಒಟ್ಟಾಗಿ ಸೇರಿ ತಹಸೀಲ್ದಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾ.ಪಂ ಸದಸ್ಯ ಕುಮಾರಶೆಟ್ಟಿ ಮಾತನಾಡಿ, ಶ್ರೀ ದಿಡ್ಡಿಯಮ್ಮ ದೇವಿಯು ಸುತ್ತಮುತ್ತಲಿನ ಗ್ರಾಮದ ಶಕ್ತಿದೇವತೆಯಾಗಿದ್ದು, ಯಾವುದೇ ಹಂಗು ಇಲ್ಲದೆ ಗ್ರಾಮಸ್ಥರು ಒಗ್ಗೂಡಿ ದೇಣಿಗೆ ಹಾಕಿಕೊಂಡು ದೇವಸ್ಥಾನ ಅಭಿವೃದ್ಧಿ ಮಾಡಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಇಲ್ಲಿನ ಅರ್ಚಕರನ್ನು ವಜಾಗೊಳಿಸಿ ಬೇರೆಯವರನ್ನು ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿ, ಎಲ್ಲರಿಗೂ ಮನವಿ ಕೊಡಲಾಗಿತ್ತು. ಆದರೆ ಸಂಬಂಧಪಟ್ಟ ಇಲಾಖೆಯ ತಹಸೀಲ್ದಾರ್ ರವರು ಯಾವ ಕಾರಣಕ್ಕೆ ತಡಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಮಹದೇವ್ ಮಾತನಾಡಿ, ಗ್ರಾಮಸ್ಥೆರಲ್ಲ ಒಗ್ಗೂಡಿ ದೇಣಿಗೆ ಹಾಕಿಕೊಂಡು ದೇವಸ್ಥಾನ ಅಭಿವೃದ್ಧಿ ಮಾಡಿದ್ದೇವೆ. ಮುಜರಾಯಿ ಇಲಾಖೆಯಿಂದ ಒಂದು ರೂಪಾಯಿ ಕೊಟ್ಟಿಲ್ಲ. ಮೊದಲು ತಹಸೀಲ್ದಾರ್ ರವರು ಅರ್ಚಕರನ್ನು ಅಧಿಕೃತವಾಗಿ ತೆರವುಗೊಳಿಸಿ, ಬೇರೆಯವರನ್ನು ನೇಮಕ ಮಾಡಬೇಕು. ಅಲ್ಲದೇ, ದೇವಿಯ ಉತ್ಸವ ಮೂರ್ತಿಯನ್ನು ಎಂದಿಗೂ ಗ್ರಾಮ ಬಿಟ್ಟು ಕೊಡುವುದಿಲ್ಲ ಅದನ್ನು ಗ್ರಾಮದಲ್ಲೇ ಇರಿಸಬೇಕು. ಸಮಸ್ಯೆ ಬಗೆಹರಿಸದಿದ್ದರೆ ತಹಸೀಲ್ದಾರ್ ವಿರುದ್ಧವೇ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಡಿ.ಕೆ ನಟೇಶ್ ಮಾತನಾಡಿ, ಶುಕ್ರವಾರ ಕಡೇ ಕಾರ್ತಿಕ ಮಾಸ ಅಂಗವಾಗಿ ದೇವರ ಉತ್ಸವ ನಡೆದ ಬಳಿಕ ದೇವತೆ ಸಂಬಂಧಪಟ್ಟ ಎಲ್ಲಾ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಮುಜುರಾಯಿ ಇಲಾಖೆಯ ಹಸ್ತಾಂತರಕ್ಕೆ ನೀಡಲಾಗಿದೆ. ಆದರೆ, ತಾಲೂಕು ತಹಸೀಲ್ದಾರ್ ದೇವಿಯ ಉತ್ಸವ ಮೂರ್ತಿಯನ್ನು ಹಸ್ತಾಂತರ ಮಾಡುವಂತೆ ಹೇಳಿದ್ದಾರೆ. ಉತ್ಸವ ಮೂರ್ತಿ ಗ್ರಾಮಸ್ಥರ ಹಕ್ಕು ಆಗಿದೆ, ವಾರದ ದಿನಗಳಲ್ಲಿ ವಿಶೇಷ ಪೂಜೆಗಳು, ಮೆರವಣಿಗೆ ನಡೆಸಲು ಅದು ಗುಡಿಯಲ್ಲಿಯೇ ಹಾಗಾಗಿ ಅದನ್ನು ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲ. ದೇವಸ್ಥಾನಕ್ಕೆ ಸಿಸಿ ಕ್ಯಾಮೆರಾ ಹಾಕಿಸಿ ಎಲ್ಲಾ ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಗ್ರಾಮದ ಮುಖಂಡ ಹರೀಶ್ ಮಾತನಾಡಿ, ಉತ್ಸವ ಮೂರ್ತಿ ಜವಾಬ್ದಾರಿ ಗ್ರಾಮಸ್ಥರದು ಆಗಿದೆ. ತಹಸೀಲ್ದಾರ್ ರವರು ಸಮಸ್ಯೆ ಬಗೆಹರಿಸುವ ಬದಲು ಹೆಚ್ಚು ಮಾಡುವ ಮೂಲಕ ಶಾಂತಿ ಸುವ್ಯವಸ್ಥೆ ಹದಗೆಡಿಸುತ್ತಿದ್ದಾರೆ. ಈ ಬಗ್ಗೆ ಸಚಿವರು, ಜಿಲ್ಲಾಧಿಕಾರಿಗಳು ಗಮನಹರಿಸಿ ಸಮಸ್ಯೆಗೆ ಮುಕ್ತಿ ನೀಡಬೇಕು, ಇಲ್ಲವಾದಲ್ಲಿ ತಾಲೂಕು ಕಚೇರಿಯ ಮುಂಭಾಗ ಗ್ರಾಮಸ್ಥರು ಎಲ್ಲರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಇದೆ ವೇಳೆ ತಹಸೀಲ್ದಾರ್ ಸೇರಿದಂತೆ ಸಚಿವರು ಇತ್ತ ಗಮನಹರಿಸಿ ಸಮಸ್ಯೆ ಬಗೆ ಹರಿಸುವಂತೆ ಗ್ರಾಮಸ್ಥರು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಕಣಗಾಲು ಗ್ರಾಮದ ಮುಖಂಡರಾದ ತಮ್ಮೆಗೌಡ, ಸ್ವಾಮಯ್ಯ, ಕುಮಾರಶೆಟ್ಟಿ, ಡಿ.ಕೆ ನಟೇಶ್, ಹರೀಶ್, ಕೆ.ಮಹದೇವ್, ಸ್ವಾಮಿಗೌಡ, ಕರೀಗೌಡ, ಶಿವ, ವಾಸು, ಪುಟ್ಟರಾಜು, ಗೋವಿಂದೆಗೌಡ, ಹರೀಶ್, ಪ್ರಭಾಕರ, ನಾಗರಾಜು, ಸೋಮೇಗೌಡ ಸೇರಿದಂತೆ ಗ್ರಾಮಸ್ಥರು ಇದ್ದರು.



