ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಹುಟ್ಟೂರಿನ ಮಕ್ಕಳು ರಾಷ್ಟಮಟ್ಟದಲ್ಲಿ ಸಾಧನೆ ಮಾಡಿದಾಗ ಅವರನ್ನು ಅಭಿನಂದಿಸಿ ಅವರ ಸಾಧನೆಯನ್ನು ಗೌರವಿಸಬೇಕು ಎಂದು ಕೆ. ಅರ್.ನಗರ ಕ್ಷೇತ್ರದ ಡಿ.ರವಿಶಂಕರ್ ಸ್ನೇಹ ಬಳಗದ ಅಧ್ಯಕ್ಷ ಎಚ್.ಎಲ್. ಡೈರಿ ಮಹದೇವ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹಳಿಯೂರು ಬಡಾವಣೆಯ ನಿವಾಸಿಗಳಾದ ಜಿ.ಪಂ.ಮಾಜಿ ಸದಸ್ಯೆ ವೀಣಾಕೀರ್ತಿ ಮತ್ತು ಹೊಸೂರು ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್.ಟಿ.ಕೀರ್ತಿ ಅವರ ಪುತ್ರ ಹೆಚ್.ಕೆ.ಚೇತನ್ ಗೌಡ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅರಣ್ಯ ವಿಭಾಗದ ಕಿರಿಯ ಸಂಶೋಧನಾ ಫೆಲೋಶಿಪ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತಾಡಿದರು.
ಗ್ರಾಮಾಂತರ ಪ್ರದೇಶದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿರುವ ಈ ದಿನಗಳಲ್ಲಿ ಚೇತನ್ ಗೌಡ ಅವರು ಈ ಪರೀಕ್ಷೆಯಲ್ಲಿ ರಾಷ್ಟಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಸಾಧಕ ವಿಧ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದು ಇವರ ಸಾಧನೆ ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊಸೂರು ಡೈರಿ ಮಾಜಿ ಅಧ್ಯಕ್ಷ ಎಚ್.ಜೆ.ರಮೇಶ್ ಮಾತನಾಡಿ ಚೇತನ್ ಗೌಡ ಅವರ ಈ ಸಾಧನೆಯ ಮೂಲಕ ಹುಟ್ಟೂರಿಗೆ ಗೌರವ ತಂದಿದ್ದು ಇಂತಹ ಪ್ರತಿಭಾವಂತರು ಸಮಾಜಕ್ಕೆ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಕಳಸಪ್ರಾಯ ಎಂದು ಕೊಂಡಾಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಅಂಕನಹಳ್ಳಿ ಷಣ್ಮುಖ, ಗ್ರಾ.ಪಂ.ಮಾಜಿ ಸದಸ್ಯ ಹೆಚ್.ಎಸ್.ರವಿ,ಜಮೀನ್ದಾರ್ ಪರಶುರಾಮ್ ಮುಖಂಡರಾದ ಕಂಡಕ್ಟರ್ ಬಲರಾಮ್, ಹಾಡ್ಯಮಹೇಶ್, ಪತ್ರಕರ್ತ ಮಂಜುನಾಥ್, ಅಂಗಡಿ ಕುಮಾರ್, ಚಿಕ್ಕಣ, ಸಲೀಂ ,ರಾಘವೇಂದ್ರ ಮತ್ತಿತರರು ಇದ್ದರು.



