ಮೈಸೂರು : ಸಮಾಜದಲ್ಲಿ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸಮಾನತೆಯ ನ್ಯಾಯ ಕಲ್ಪಿಸಿ ಕೊಡುವುದಕ್ಕೆ ನಮ್ಮ ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ ನ ಸದಸ್ಯ ಸಿ. ಎನ್ ಮಂಜೇಗೌಡ ಹೇಳಿದರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆಯನ್ನು ದೀಪ ಬೆಳಗಿಸಿ, ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡಿ ಸಂವಿಧಾನ ಪೀಠಿಕೆಯನ್ನು ಬೋಧಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ನಾನು ವಿಧಾನ ಪರಿಷತ್ ಸದಸ್ಯ ನಾಗಿ ಅಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ ಎಂದರೆ ಅದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಹಾಗಾಗಿ ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿದೆ. ಅದರಿಂದಲೇ ಎಲ್ಲರ ಮನದಲ್ಲೂ ಅಂಬೇಡ್ಕರ್ ನೆಲೆಸಿದ್ದಾರೆ ಎಂದು ಹೇಳಿದರು.
ಸಂವಿಧಾನ ರಚನೆ ಮಾಡದೆ ಇದ್ದಿದ್ದರೆ ನಾವು ಯಾರು ಬದುಕಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯರು, ಹಿಂದುಳಿದ ಸಮುದಾಯದವರು ಯಾರೂ ಸಹ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ, ಹೆಣ್ಣು ಮಕ್ಕಳು ಸ್ವತಂತ್ರವಾಗಿ ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೆ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವೇ ಕಾರಣ ಎಂದು ತಿಳಿಸಿದರು.
ವಿಧಾನ ಪರಿಷತ್ ನ ಸದಸ್ಯ ಡಾ. ಡಿ ತಿಮ್ಮಯ್ಯ ಮಾತನಾಡಿ ಬ್ರಿಟಿಷರ ಆಳ್ವಿಕೆ ಮಾಡುತಿದ್ದ ಕಾಲದಲ್ಲಿ ಹಸಿವು, ಅನಾರೋಗ್ಯ ಪೀಡಿತವಾಗಿ ಅನೇಕ ರೋಗಗಳಿಗೆ ತುತ್ತಾಗಿದಂತಹ ದೇಶ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರೆ ಅದಕ್ಕೆ ಕಾರಣ ನಮ್ಮ ಸಂವಿಧಾನ ಎಂದು ಹೇಳಿದರು.
ನಮ್ಮ ದೇಶ ಬೇರೆ ದೇಶಗಳಿಗಿಂತ ಏನು ಕಡಿಮೆಯಿಲ್ಲ. ಕೈಗಾರಿಕೆ, ನೀರಾವರಿ, ಕೃಷಿ, ತಂತ್ರಜ್ಞಾನ , ಐ.ಟಿ.ಬಿ.ಟಿ ಕ್ಷೇತ್ರದಲ್ಲಿ ಹೆಚ್ಚು ಬೆಳೆದಿದೆ ಎಂದರೆ ಅದಕ್ಕೆ ನಮ್ಮ ಅಂಬೇಡ್ಕರ್ ಅವರೇ ಕಾರಣ. ನಮ್ಮ ದೇಶ ಇನ್ನೂ ಹೆಚ್ಚು ಬೆಳೆಯಬೇಕು ಎಂದರೆ ನಮ್ಮಲ್ಲಿ ಇರುವ ಜಾತಿ ಪದ್ಧತಿ ದೂರಾಗಬೇಕು, ಜ್ಯಾತ್ಯಾತೀತವಾಗಿ ಮತ್ತು ನಾವೆಲ್ಲರೂ ಒಂದು ಎಂದು ಮುಂದೆ ಸಾಗಬೇಕು. ಸಮಾಜದಲ್ಲಿ ಸಮಾನತೆಯಿಂದ
ನಾವೆಲ್ಲರೂ ಬದುಕಬೇಕು. ಭಾರತೀಯರು ನಾವೆಲ್ಲರೂ ಒಂದೇ ಎಂಬ ಮನೋಭಾವನೆ ನಮ್ಮಲ್ಲಿ ಬರಬೇಕು ಎಂದರು.
ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ ಡಾ. ಬಿ.ಆರ್ ಅಂಬೇಡ್ಕರ್ ಅವರು ನಮಗೆ ನೀಡಿರುವಂತಹ ಸಂವಿಧಾನವನ್ನು ನಾವೆಲ್ಲರೂ ಶಿಸ್ತು ಬದ್ಧವಾಗಿ ಪಾಲನೆ ಮಾಡಬೇಕು. ಸಂವಿಧಾನದಲ್ಲಿ ನಮಗೆ ಎಲ್ಲಾ ರೀತಿಯ ಹಕ್ಕುಗಳನ್ನು ನೀಡಿದ್ದಾರೆ. ಅದನ್ನು ಕೇಳುವಂತಹ ಅಧಿಕಾರವನ್ನು ಸಹ ನಮ್ಮ ಸಂವಿಧಾನ ನಮಗೆ ನೀಡಿದೆ. ಹಾಗಾಗಿ ನೀವೆಲ್ಲರೂ ಯುವಕರು ಮುಂದಿನ ಪ್ರಜೆಗಳು ನಾವೆಲ್ಲರೂ ಸಂವಿಧಾನವನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸೀಫ್, ಕರಾಮುವಿ ವಿ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ. ಆರ್.ಹೆಚ್. ಪವಿತ್ರ ಮಾತನಾಡಿದರು.
ಈ ಸಂದರ್ಭ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ. ಬಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಎಸ್.ಯುಕೇಶ್ ಕುಮಾರ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಎಸ್. ಹೆಚ್, ಮುಖಂಡ ಸೋಮಣ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪುರಭವನ ಮುಂಭಾಗ ಇರುವ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನ ಜಾಗೃತಿ ಜಾಥಾಗೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ಎಸ್.ಶ್ರೀವತ್ಸ, ವಿಧಾನ ಪರಿಷತ್ ನ ಸದಸ್ಯ ಸಿ. ಎನ್. ಮಂಜೇಗೌಡ ಚಾಲನೆ ನೀಡಿದರು.
ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಸೇರಿದಂತೆ ಹಲವರು ಹಾಜರಿದ್ದರು.



