ಹುಣಸೂರು: ನೀವು ಪರೀಕ್ಷೆಗಾಗಿ ಓದುವ ಬದಲು ಭವಿಷ್ಯದ ಪರೀಕ್ಷೆಗೆ ಪ್ರಜ್ಞಾವಂತರಾಗಬೇಕು ಎಂದು ರೋಟರಿ ಹಿರಿಯ ಸದಸ್ಯೆ ಡಾ.ಸರೋಜಿನಿ ವಿಕ್ರಂ ತಿಳಿಸಿದರು.
ತಾಲೂಕಿನ ತಟ್ಟೆಕೆರೆ ಗ್ರಾಮದ ಮಾರುತಿ ಫ್ರೌಡಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆಯಲ್ಲಿ ರೋಟರಿ ಸಂಸ್ಥೆವತಿಯಿಂದ ಪೆನ್, ಪುಸ್ತಕ ವಿತರಿಸಿ ಮಾತನಾಡಿದ ಅವರು, ಕಲಿಕೆಯ ಸಂದರ್ಭದಲ್ಲಿ ವಿಚಲಿತರಾಗದೆ ಅಕ್ಷರ ಜ್ಞಾನವನ್ನು ಸಂಪಾದಿಸಿದರೆ ಯಾರ ಭಯವಿಲ್ಲದೆ ಬದುಕಿನ ಶಿಖರವೇರಬಹುದು ಎಂದರು.
ನಂತರ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್, ವಿದ್ಯೆ ಕಲಿಸುವ ಗುರು, ಬುದ್ದಿ ಹೇಳುವ ತಂದೆ ತಾಯಿಯನ್ನು ಗೌರವಿಸಿದಾಗ ನಿಮ್ಮ ಎಲ್ಲಾ ಪ್ರಾರ್ಥನೆ ಫಲಿಸಲಿದೆ, ಆದ್ದರಿಂದ ಬಾಲ್ಯದಲ್ಲೇ ನಿಮ್ಮ ಜ್ಞಾನವನ್ನು ಓದುವ ಕಡೆ ಹರಿಸಿದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದರು.
ಶಾಲೆಯ ಉಪಾಧ್ಯಕ್ಷ ತಟ್ಟೆಕೆರೆ ನಾಗೇಗೌಡ ಮಾತನಾಡಿ, ರೋಟರಿ ಸಂಸ್ಥೆ ಅಂದಿನಿಂದಲೂ ಸರಕಾರಿ ಶಾಲೆಗಳಿಗೆ ಉತ್ತೇಜನ ನೀಡುತ್ತಿದ್ದು, ಗ್ರಾಮೀಣ ಭಾಗದ ಮಕ್ಕಳೂ. ಅದರ ಸದ್ಬಳಕೆ ಮಾಡಿಕೊಂಡು ಶಾಲೆಗೆ ಹೆಸರು ತರಬೇಕೆಂದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಶ್ರೀಧರ್, ಶಿಕ್ಷಕಿಯರಾದ ಪುಷ್ಪಲತಾ, ಮಾನಸ, ಹಾಗೂ ಗಿರೀಶ್, ಬಾಲೆಸಾಬ ಕನ್ಯಾಳ್ ಹಾಗೂ ಮಕ್ಕಳು ಹಾಜರಿದ್ದರು.



