ಕೊಪ್ಪಳ : ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕ ಶಿವಶರಣಪ್ಪಗೌಡ (79) ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ. ಶಿವಶರಣಪ್ಪಗೌಡ ಅವರು 1999ರಿಂದ 2004ರ ವರೆಗೂ ಯಲಬುರ್ಗಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ನಾಲ್ಕು ಜನ ಪುತ್ರರು ಮತ್ತು ಪತ್ನಿಯನ್ನು ಅಗಲಿದ್ದಾರೆ.
ಯಲಬುರ್ಗಾ ಪಟ್ಟಣದಲ್ಲಿರುವ ಶಿವಶರಣಪ್ಪಗೌಡ ಅವರ ನಿವಾಸದಲ್ಲಿ ಬುಧಾವರ ಸಂಜೆಯಿಂದ ಗುರುವಾರ ಬೆಳಗದಗಿನವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ. ನಂತರ ಅವರ ಸ್ವಗ್ರಾಮ ಯಲಬುರ್ಗಾ ಹುಣಿಸ್ಯಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಾಸಕರಾಗುವ ಮೊದಲು ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿಯೂ ಶಿವಶರಣಪ್ಪಗೌಡರು ಕಾರ್ಯ ನಿರ್ವಹಿಸಿದ್ದರು.
ಯಲಬುರ್ಗಾ ಕ್ಷೇತ್ರದ ರಾಜಕೀಯದಲ್ಲಿ ದೀರ್ಘಕಾಲದ ಅನುಭವ ಹೊಂದಿದ್ದ ಶಿವಶರಣಪ್ಪಗೌಡರು, 1999ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2004ರ ವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದ ಇವರು ಆ ಕಾಲದಲ್ಲಿ ಕೊಪ್ಪಳ ಜಿಲ್ಲೆಯಲ್ಲೇ ಜನಪ್ರಿಯ ಶಾಸಕರಾಗಿದ್ದರು. ರೈತರ ಸಮಸ್ಯೆಗಳಿಗೆ ಧ್ವನಿಯಾಗಿದ್ದಲ್ಲದೆ, ಮೂಲ ಸೌಕರ್ಯಗಳ ಅಭಿವೃದ್ಧಿಗೂ ವಿಶೇಷ ಗಮನ ನೀಡಿದ್ದರು. ಇಂತಹ ನಾಯಕ ಶಿವಶರಣಪ್ಪಗೌಡ ಅವರ ನಿಧನಕ್ಕೆ ರಾಜಕೀಯ ನಾಯಕರು, ಗಣ್ಯರಿಂದಲೂ ಸಂತಾಪ ವ್ಯಕ್ತವಾಗಿದೆ.



