ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮದ್ಯ ತಯಾರಿ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬೆನ್ನಲ್ಲೇ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮುಖಾಂತರ ಐಟಿ ಬಿಟಿ ಕಂಪನಿಗಳಿಗೆ ಬೈ ಬೈ. ಕಳ್ಳಬಟ್ಟಿ ಫ್ಯಾಕ್ಟರಿಗಳಿಗೆ ಜೈ ಜೈ ಎಂದು ವ್ಯಂಗ್ಯಮಾಡಿದ್ದಾರೆ.
ಇದಲ್ಲದೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಪರಪ್ಪನ ಅಗ್ರಹಾರ ರೆಸಾರ್ಟ್ಸ್ & ಹೋಮ್ ಸ್ಟೇ ಮೂಲಕ ಖೈದಿಗಳಿಗೆ ರಾಜಾತಿಥ್ಯ ನೀಡಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಅಲ್ಲೊಂದು ಡಿಸ್ಟಿಲರೀಸ್ ತೆರೆಯುವ ಮೂಲಕ ಮದ್ಯ ತಯಾರಿ ಉದ್ಯಮ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದೆ.
ಪರಮೇಶ್ವರ್ ಅವರಿಗೆ ಕಾರಾಗೃಹಗಳು ಮದ್ಯದ ಕಾರ್ಖಾನೆಗಳಾಗಿ ಮಾರ್ಪಟ್ಟಿರುವ ಬಗ್ಗೆ ಗೊತ್ತಿದೆಯೋ ಅಥವಾ ಎಂದಿನಂತೆ “ಗೊತ್ತಿಲ್ಲ” ಎಂದು ಜಾರಿಕೊಳ್ಳುತ್ತೀರೋ? ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಅಪರಾಧ ಮಾಡುವ ಖೈದಿಗಳಿಗೆ ಭಯ ಹುಟ್ಟಿಸಬೇಕಿದ್ದ ಜೈಲುಗಳು ಕಾಂಗ್ರೆಸ್ ಸರ್ಕಾರದಲ್ಲಿ ಐಶಾರಾಮಿ ವಸತಿಗೃಹಗಳಾಗಿ ಬದಲಾಗಿರುವುದು ದುರಂತ. ಇಷ್ಟೆಲ್ಲಾ ನಡೆಯುತ್ತಿದ್ದರೂ ಗೃಹಸಚಿವ ಪರಮೇಶ್ವರ್ ಅವರಿಗೆ ಈ ವಿಷಯವೇ ಗೊತ್ತಿರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಒಂದು ಕಡೆ ಕಾಂಗ್ರೆಸ್ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ಮುಳುಗಿದ್ದರೆ, ಮತ್ತೊಂದು ಕಡೆ ಆಡಳಿತ ನಿಷ್ಕ್ರಿಯತೆಯಿಂದ ಜೈಲುಗಳು ಮದ್ಯದ ತಯಾರಿಕಾ ಫ್ಯಾಕ್ಟರಿಗಳಾಗಿ ಮಾರ್ಪಟ್ಟಿವೆ. ಕಳಬಟ್ಟಿ ತಯಾರಕರೇ ಕಾರಗೃಹದ ದೊರೆಗಳಾಗಿದ್ದು ಗೃಹ ಸಚಿವ ಪರಮೇಶ್ವರ್ ಅವರೇ, ಕಾರಾಗೃಹಗಳು ಕಳ್ಳಬಟ್ಟಿ ಕಾರ್ಖಾನೆಗಳಾಗಿ ಮಾರ್ಪಟ್ಟಿರುವ ವಿಷಯ ತಮಗೆ ಗೊತ್ತಿದೆಯೋ ಅಥವಾ ಎಂದಿನಂತೆ ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತೀರೋ? ಎಂದು ಪ್ರಶ್ನಿಸಿದ್ದಾರೆ.



