ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಪಟ್ಟಣದ ಶ್ರೀ ಮಾರುತಿ ಯುವಕರ ಸಂಘದ ವತಿಯಿಂದ ಡಿಸೆಂಬರ್ ಮಾಹೆಯಲ್ಲಿ ಆಯೋಜಿಸಿರುವ ನಮ್ಮೂರ ಹನುಮೋತ್ಸವ ಕಾರ್ಯಕ್ರಮಕ್ಕೆ ಪಟ್ಟಣ ಹಾಗೂ ತಾಲೂಕಿನ ಎಲ್ಲಾ ಹನುಮ ಭಕ್ತರು ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಶ್ರೀ ಮಾರುತಿ ಯುವಕ ಸಂಘದ ಖಜಾಂಚಿ ಕೆಂಚಿ ಮಂಜುನಾಥ್ ಕೋರಿದರು.
ಪಟ್ಟಣದ ಆಂಜನೇಯ ಬಡಾವಣೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಸ್ಥಳೀಯರಿಗೆ ಕಾರ್ಯಕ್ರಮದ ಕರಪತ್ರ ವಿತರಣೆ ಮಾಡಿ ನಂತರ ಮಾತನಾಡಿದ ಅವರು ಪ್ರತಿವರ್ಷದಂತೆ ನಮ್ಮ ಬಡಾವಣೆಯ ಶ್ರೀ ಮಾರುತಿ ಯುವಕರ ಸಂಘದಿಂದ ನಮ್ಮೂರ ಹನುಮೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಭಕ್ತಾದಿಗಳು ಹಾಗೂ ನಾಗರಿಕರು ಪಾಲ್ಗೊಂಡು ಮಾರುತಿ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಡಿ.2 ಮಂಗಳವಾರ ಬೆಳಿಗ್ಗೆ ಗಣಪತಿ ಪೂಜೆ, ಕಳಸಾರಾಧನೆ, ಅಭಿಷೇಕ, ರಾಮ ತಾರಕ, ಹೋಮ, ಉಸ್ತವ ಮೂರ್ತಿಗೆ ಸಾಮೂಹಿಕ ಅಭಿಕ್ಷೇಕ, ಸಿಂಧೂರ ಅಲಂಕಾರ, ಸಂಜೆ ಅಷ್ಟ ಅವಧಾನ ಸೇವೆ, ತುಳಸಿ ಅರ್ಚನೆ, ರಾತ್ರಿ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ. ಡಿ.3 ಉತ್ಸವ ಮೂರ್ತಿಗೆ ಸಾಮೂಹಿಕ ಮೊಸರು, ಮೂಲದೇವರಿಗೆ ಅರಿಶಿನ ಅಲಂಕಾರ. ರಾತ್ರಿ 7.30ಕ್ಕೆ ಕಥಾ ಕಲಾಕ್ಷೇಪ. ಡಿ.4 ಗುರುವಾರದಂದು ಬೆಳಗ್ಗೆ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಅನ್ನ ಸಂತರ್ಪಣೆ, ಸಂಜೆ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ ಎಂದರು.
ಡಿ.5 ಉಸ್ತವಮೂರ್ತಿಗೆ ಜೇನುತುಪ್ಪದ ಅಭಿಷೇಕ ಮೂಲ ದೇವರಿಗೆ ಪಂಚರಂಗಿ ಅಲಂಕಾರ. ಸಂಜೆ ಸ್ವಾಮಿಯವರಿಗೆ ಕುಂಕುಮಾರ್ಚನೆ, ರಾತ್ರಿ ಪುಟ್ಟಸ್ವಾಮಿ ಮೆಲೋಡಿಸ್ ಆರ್ಕೆಸ್ಟ್ರ ಅವರಿಂದ ರಸಮಂಜರಿ ಕಾರ್ಯಕ್ರಮ. ಡಿ.6 ಬೆಳಿಗ್ಗೆ ಮೂಲ ದೇವರಿಗೆ ಹೂವಿನ ಅಲಂಕಾರ, ಸಂಜೆ ಹತ್ತು ಸಾವಿರದ ಒಂದು ದೀಪೋತ್ಸವ. ಡಿ.7 ಭಾನುವಾರ ಬೆಳಿಗ್ಗೆ ಎಳ್ಳೆಣ್ಣೆ ಅಭಿಷೇಕ, ಮೂಲ ದೇವರಿಗೆ ಗಂಧ ಅಲಂಕಾರ. ರಾತ್ರಿ 7:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ. ಡಿ.8 ಸೋಮವಾರ ಬೆಳಿಗ್ಗೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ತಿಳಿಸಿದರು.
ಡಿ.9 ಮಂಗಳವಾರ ಬೆಳಿಗ್ಗೆ ಸ್ವಾಮಿಗೆ ಕೊಬ್ಬರಿ ಎಣ್ಣೆ ಮಜ್ಜನ ಅಭಿಷೇಕ(ಓಕುಳಿ), ಸಂಜೆ ಪಲ್ಲಕ್ಕಿ ಉತ್ಸವ, ರಾತ್ರಿ ತೊಟ್ಟಿಲ ಸೇವೆ, ಪಟಾಕಿ ಪ್ರದರ್ಶನ. ಡಿ.10 ಬೆಳಿಗ್ಗೆ ನಮ್ಮೂರ ಹನುಮೋತ್ಸವ ಬೃಹತ್ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಹನುಮ ಮೂರ್ತಿಯೊಂದಿಗೆ ವಿವಿಧ ಜಾನಪದ ಕಲಾತಂಡಗಳು ಮತ್ತು ಮಂಗಳವಾದ್ಯ ಹಾಗೂ ಎಲ್ಲಾ ಹನುಮ ಭಕ್ತ ಸಮೂಹದೊಂದಿಗೆ ಮೆರವಣಿಗೆ. ರಾತ್ರಿ ಉಸ್ತವಮೂರ್ತಿಗೆ ಪೂಜಾ ಕಾರ್ಯಕ್ರಮ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಸರ್ವರು ಭಾಗವಹಿಸಿ ಯಶಸ್ವಿಗೊಳಿಸಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಾರುತಿ ಯುವಕರ ಸಂಘದ ಕಾರ್ಯದರ್ಶಿ ಮೆಕಾನಿಕ್ ವಿನಯ್, ಪ್ರಚಾರ ಸಮಿತಿ ಅಧ್ಯಕ್ಷ ದರ್ಶನ್ ಮಂಡಿ, ಸದಸ್ಯರಾದ ಮಂಜುವಾಲ, ಪುನೀತ್, ಹಾಸಿಗೆ ನಾಗ, ಸಾಮಿಯಾನ ಸಾಗರ್, ನಂದೀಶ್, ಧನರಾಜ್, ದೇವಮ್ಮ ಇದ್ದರು.



