ಬೆಂಗಳೂರು : ನಗರದೆಲ್ಲೆಡೆ ನಾಯಿ ಕೊಡೆಗಳಂತೆ ಅಕ್ರಮ ಕಟ್ಟಡ ನಿರ್ಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಇನ್ನು ಮುಂದೆ ಅಕ್ರಮ ಕಟ್ಟಡ ನಿರ್ಮಿಸುವವರಿಗೆ ಉಳಿಗಾಲವಿಲ್ಲ. ಒಂದು ವೇಳೆ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದರೆ 130 ದಿನಗಳ ಒಳಗೆ ಡೆಮಾಲಿಷನ್ ಆಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧಾರ ಕೈಗೊಂಡಿದ್ದಾರೆ.
ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜಿಬಿಎ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆ ತಡೆಗೆ ಹೊಸ ಮಾರ್ಗಸೂಚಿ ರೆಡಿಯಾಗಿದ್ದು, ಕಟ್ಟಡ ನಿರ್ಮಿಸುವ ನಕ್ಷೆ ಯಾವ ರೀತಿ ಇರಬೇಕೆಂದೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಅನುಮತಿ ಇದ್ದರೆ ಮಾತ್ರ ಕಟ್ಟಡ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಭಾರಿ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಮೊದಲು ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತಿರ್ಮಾನಿಸಿದೆ. ಈಗಾಗಲೇ ಬೆಂಗಳೂರು ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಈ ಆದೇಶ ಹೊರಡಿಸಿದ್ದು, ಮಾರ್ಗಸೂಚಿ ಪ್ರಕಾರ ಕಟ್ಟಡ ನಿರ್ಮಿಸದಿದ್ದರೆ, ನೊಟೀಸ್ ನೀಡಬೇಕು. ಅನುಮತಿ ಪಡೆಯದೇ ಕಟ್ಟಡ ಕಟ್ಟಿದ್ದರೆ ಅಂತಹ ಕಟ್ಟಡ ಡೆಮಾಲಿಷನ್ ಆಗುವುದು ನಿಶ್ಚಿತ ಎಂದಿದ್ದಾರೆ.
ಮಾರ್ಗಸೂಚಿಯಲ್ಲಿ ಏನಿದೆ ನೋಡುವುದಾದರೆ, 15 ಮೀಟರ್ ಎತ್ತರದ ಕಟ್ಟಡಗಳಿಗೆ ಈ ಮಾರ್ಗಸೂಚಿ ಅನ್ವಯ. ನಕ್ಷೆ ಅನುಮತಿ ಪಡೆದು 15 ದಿನದೊಳಗೆ ತಳಪಾಯದ ಗಡಿರೇಖೆ ಗುರುತು ಮಾಡಬೇಕು, ತಳಪಾಯದ ಗುರುತಿನ ಬಳಿಕ ತಳಪಾಯದ ಪ್ರಮಾಣಪತ್ರ ನೀಡಬೇಕು, ವಲಯ ಮಟ್ಟದ ಉಪ ನಿರ್ದೇಶಕರು ತಳಪಾಯ ಪ್ರಮಾಣಪತ್ರ ದೃಢೀಕರಿಸಿಕೊಳ್ಳಬೇಕು.
15 ಮೀಟರ್ ಗಿಂತ ಎತ್ತರದ ಕಟ್ಟಡಗಳಿಗೆ ಜಂಟಿ ನಿರ್ದೇಶಕರಿಗೆ ಜವಾಬ್ದಾರಿ ನೀಡಲಾಗಿದೆ. ನಕ್ಷೆ ಮಂಜೂರಾದ ದಾಖಲೆಗಳನ್ನ ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ. ನಗರ ಯೋಜನೆಯಲ್ಲಿರುವ ಸಿಬ್ಬಂದಿ ಕಾಲಕಾಲಕ್ಕೆ ಇದರ ತಪಾಸಣೆ ಮಾಡಬೇಕು ವರ್ಷಕ್ಕೆ ಆರು ಬಾರಿ ತಪಾಸಣೆ ಕಡ್ಡಾಯ ಎಂದು ಸೂಚಿಸಿದ್ದಾರೆ.
ಜನವರಿ, ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್, ನವೆಂಬರ್‌ನಲ್ಲಿ ತಪಾಸಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ನಕ್ಷೆ ಪಡೆದ ಮೇಲೆ ಉಲ್ಲಂಘನೆ ಕಂಡು ಬಂದರೆ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಹಿರಿಯ ಅಧಿಕಾರಿಗಳು ನಿಯಮದ ಪ್ರಕಾರ ಕ್ರಮ ಕೈಗೊಳ್ಳಬೇಕು. ನಕ್ಷೆ ಪಡೆಯದೆ ನಿರ್ಮಿಸಿರೋ ಕಟ್ಟಡ ತಕ್ಷಣ ತೆರವು ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.



