ಗುಂಡ್ಲುಪೇಟೆ: ಶಾಲಾ ಶೈಕ್ಷಣಿಕ ಅವಧಿಯು ವಿದ್ಯಾರ್ಥಿ ಜೀವನದಲ್ಲಿ ಮಹತ್ವವಾಗಿದ್ದು, ಕ್ರೀಡೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವ ಮೂಲಕ ದೈಹಿಕ, ಮಾನಸಿಕವಾಗಿ ಸದೃಢರಾಗಬೇಕು ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಲಹೆ ನೀಡಿದರು.
ಪಟ್ಟಣದ ಡಿ.ದೇವರಾಜು ಅರಸು ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಾಲೂಕಿಗೆ ಒಳ್ಳೆಯ ಹೆಸರು ತನ್ನಿ ಎಂದು ಹಾರೈಸಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಅದನ್ನು ಸಮವಾಗಿ ಸ್ವೀಕರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರವೂ ಸಹ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕ್ರೀಡೆಗಳಿಗೂ ಸಹ ಉತ್ತೇಜನ ನೀಡುತ್ತಿದೆ. ವಿದ್ಯಾರ್ಥಿಗಳು ಅವುಗಳನ್ನು ಬಳಕೆ ಮಾಡಿಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಮಾತನಾಡಿ, ಕ್ರೀಡೆ ಕೇವಲ ಬಹುಮಾನಕ್ಕೆ ಸೀಮಿತವಲ್ಲ. ಶಾಳಾ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಾವಸ್ಥೆಯಲ್ಲಿ ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುವುದರ ಮೂಲಕ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಇದರಿಂದ ಮುಂದಿನ ದಿನಮಾನಸದಲ್ಲಿ ಉತ್ತಮ ಕ್ರೀಡಾಪಟುಗಳಾಗುವ ಜೊತೆಗೆ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಭಾಗವಹಿಸಿರುವವರು ಸೋಲು-ಗೆಲುವು ಎರಡನ್ನು ಸ್ವೀಕರಿಸಿ ಕ್ರೀಡಾಸ್ಪೂರ್ತಿ ಮೆರೆಯೋಣ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಎನ್.ಕುಮಾರ್, ತಾಲೂಕು ದೈಹಿಕ ಪರಿವೀಕ್ಷಕ ಮಲ್ಲನಾಯಕ, ದೈಹಿಕ ಶಿಕ್ಷಕರಾದ ಅನ್ನಪೂರ್ಣ, ಶ್ರೀನಿವಾಸನಾಯಕ ಸೇರಿದಂತೆ ಇನ್ನಿತರರು ಹಾಜರಿದ್ದರು.