ಹುಣಸೂರು
ಮೈಸೂರು : ಜಿಲ್ಲೆಯಲ್ಲಿ ಹುಲಿ ಆತಂಕ ಮುಂದುವರಿದಿದ್ದು, ಸರಗೂರು, ಹೆಚ್.ಡಿ ಕೋಟೆ ನಂತರ ಈಗ ಹುಣಸೂರಿನಲ್ಲಿ ಹುಲಿ ಕಾಟ ಶುರುವಾಗಿದ್ದು, ಇಬ್ಬರು ರೈತರ ಮೇಲೆ ಹುಲಿ ದಾಳಿ ನಡೆಸಿದೆ.
ಗೌಡನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ರೈತರು ಪಾರಾಗಿದ್ದಾರೆ. ಗೌಡನಕಟ್ಟೆಯ ರೈತ ಪ್ರಕಾಶ್ ಹಾಗೂ ಸ್ವಾಮಿ ಹುಲಿ ದಾಳಿಯಿಂದ ಪಾರಗಿದ್ದಾರೆ. ಹುಲಿ ಘರ್ಜಿಸುತ್ತಾ ದಾಳಿಗೆ ಬಂದಾಗ ಜೋರಾಗಿ ರೈತರು ಕಿರುಚಿಕೊಂಡಿದ್ದಾರೆ.
ಅಕ್ಕ ಪಕ್ಕದಲ್ಲಿದ್ದ ರೈತರು ಸಹ ಜೋರಾಗಿ ಕೂಗಿಕೊಂಡಿದ್ದರಿಂದ ಹುಲಿ ವಾಪಸ್ಸಾಗಿದೆ. ಹೊಲದಲ್ಲೇ ಹುಲಿ ಮರಿಗಳಿರುವ ಸಾಧ್ಯತೆ ಇರುವುದರಿಂದ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ರೈತರು ಘೇರಾವ್ ಹಾಕಿ ಹುಲಿ ಸೆರೆ ಹಿಡಿದ ನಂತರವಷ್ಟೆ ಸ್ಥಳದಿಂದ ಹೋಗವಂತೆ ತಾಕೀತು ಮಾಡಿದರು.
ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಅರಣ್ಯಾಧಿಕಾರಿಗಳು ರಾತ್ರಿಯಿಂದ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದು, 4 ಆನೆಗಳೊಂದಿಗೆ ಅರಣ್ಯ ಇಲಾಖೆಯ ಟಾಸ್ಕ್ ಪೋರ್ಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.



