Monday, December 1, 2025
Google search engine

Homeರಾಜಕೀಯಜೈಲಿಗೆ ಹಾಕಿದರೂ ರಾಹುಲ್ ಗಾಂಧಿ ಹಿಂಜರಿಯಲ್ಲ : ಡಿ.ಕೆ.ಶಿವಕುಮಾರ್‌

ಜೈಲಿಗೆ ಹಾಕಿದರೂ ರಾಹುಲ್ ಗಾಂಧಿ ಹಿಂಜರಿಯಲ್ಲ : ಡಿ.ಕೆ.ಶಿವಕುಮಾರ್‌

ಬೆಂಗಳೂರು : ರಾಜಕೀಯ ದ್ವೇಷಕ್ಕಾಗಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ರಾಹುಲ್ ಗಾಂಧಿ ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿರುವ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ, ಇದು ಅನ್ಯಾಯ. ಯಾರಿಗೆ ಆಗಲಿ ಕಿರುಕುಳ ನೀಡುವುದಕ್ಕೆ ಒಂದು ಮಿತಿ ಇದೆ.

ಈ ಪ್ರಕರಣದಲ್ಲಿ ಕಿರುಕುಳ ನೀಡುವ ಅಗತ್ಯವಿಲ್ಲ. ನ್ಯಾಷನಲ್ ಹೆರಾಲ್ಡ್ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರ ಆಸ್ತಿಯಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದ ಕಾರಣಕ್ಕೆ ಅವರು ಈ ಸಂಸ್ಥೆಯ ಷೇರುಗಳ ಪಾಲಕರಾಗಿದ್ದರು. ನಾನು ಹಾಗೂ ಸಿಎಂ ಅವರೂ ಕೂಡ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಾಗಿದ್ದೇವೆ. ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಕನಿಷ್ಠ 1-2 ಷೇರುಗಳು ಇರುತ್ತವೆ. ನಮ್ಮ ಅಧಿಕಾರ ಮುಗಿದ ನಂತರ ಈ ಷೇರುಗಳು ವರ್ಗಾವಣೆಯಾಗುತ್ತದೆ. ಅದೇ ರೀತಿ ನಮ್ಮ ನಾಯಕರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಕಾರಣ, ಜವಹಾರ್ ಲಾಲ್ ನೆಹರೂ ಅವರ ಕಾಲದಿಂದ ನಡೆದುಕೊಂಡು ಬಂದಿರುವ ಪ್ರತೀತಿಯಂತೆ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಜವಾಬ್ದಾರಿ ಹೊತ್ತಿರುತ್ತಾರೆ ಎಂದು ತಿಳಿಸಿದರು.

ನ್ಯಾಷನಲ್ ಹೆರಾಲ್ಡ್ ಅವರ ವೈಯಕ್ತಿಕ ಆಸ್ತಿಯಲ್ಲ, ಪಕ್ಷದ ಆಸ್ತಿ:

ಯಂಗ್ ಇಂಡಿಯಾ ಅಗಲಿ, ನ್ಯಾಷನಲ್ ಹೆರಾಲ್ಡ್ ಆಗಲಿ ನಮ್ಮ ವೈಯಕ್ತಿಕ ಆಸ್ತಿಯಲ್ಲ ಎಂದು ಈಗಾಗಲೇ ಅವರು ಘೋಷಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ಪಕ್ಷದ ಪಾಲಕರು ಅವರಾಗಿದ್ದಾರೆ. ಇಲ್ಲಿ ಅನೇಕ ಸದಸ್ಯರುಗಳು ಇದ್ದಾರೆ. ಮೊರಾರ್ಜಿ ಅವರು, ಅಹ್ಮದ್ ಪಟೇಲ್ ಅವರ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಹಿತಕ್ಕಾಗಿ ಕೆಲವು ನಿರ್ಧಾರ ಕೈಗೊಳ್ಳಲಾಗಿತ್ತು. ಕೇಸರಿ ಅವರ ಕಾಲದಲ್ಲಿ ಪಕ್ಷ ಸಂಕಷ್ಟದ ಸಮಯದಲ್ಲಿದ್ದಾಗ, ಕಾಂಗ್ರೆಸ್ ಪಕ್ಷದ ನಾಯಕರಾದ ನಾವುಗಳು ಸೋನಿಯಾ ಗಾಂಧಿ ಅವರ ಮುಂದೆ ಹೋಗಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವಂತೆ ಬೇಡಿಕೊಂಡೆವು. ಅವರು ನೇತೃತ್ವ ವಹಿಸಿದ ನಂತರ ನಮ್ಮ ಪಕ್ಷ ದೇಶದ ಅತ್ಯುತ್ತಮ ಆರ್ಥಿಕ ತಜ್ಞರ ಮುಂದಾಳತ್ವದಲ್ಲಿ 10 ವರ್ಷ ಆಡಳಿತ ನಡೆಸಿದೆ.

ಈಗ ರಾಜಕೀಯವಾಗಿ ಕಿರುಕುಳ ನೀಡಲು ಈ ರೀತಿ ಮಾಡಲಾಗುತ್ತಿದೆ ಎಂದಿದ್ದಾರೆ. ಹಾಗೂ ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಿದರೂ ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ಈ ದ್ವೇಷ ರಾಜಕಾರಣ ಸರಿಯಲ್ಲ. ಇದರಿಂದ ಅವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕೇಂದ್ರಕ್ಕೆ ಹೇಳಲು ಬಯಸುತ್ತೇನೆ. ಇದು ಕೇಂದ್ರ ಸರ್ಕಾರದ ನೈತಿಕತೆಯನ್ನಷ್ಟೇ ಕುಗ್ಗಿಸಲಿದೆ. ರಾಜಕೀಯವನ್ನು ನೇರಾನೇರವಾಗಿ ಜನರ ಮಧ್ಯೆ ಮಾಡೋಣ. ಚುನಾವಣೆಯಲ್ಲಿ ಹೋರಾಡೋಣ. ಆದರೆ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಬಳಿಕ ನಾಳೆ ಸಿಎಂ ಅವರನ್ನು ಉಪಹಾರಕೂಟಕ್ಕೆ ಆಹ್ವಾನಿಸಿದ್ದೀರಾ ಎಂದು ಕೇಳಿದಾಗ, ಇದು ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರ. ನಾವಿಬ್ಬರು ಸಹೋದರರಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನೀವುಗಳು ಸದಾ ಗುಂಪು, ಗುಂಪು ಎಂದು ಬಿಂಬಿಸುತ್ತಿದ್ದೀರಿ. ನಮ್ಮಲ್ಲಿ ಯಾವುದೇ ಗುಂಪಿಲ್ಲ. ನಮ್ಮ ಜೊತೆ 140 ಶಾಸಕರಿದ್ದಾರೆ. ನಾವು ಹುಟ್ಟುವಾಗಲೂ ಒಬ್ಬರೇ, ಸಾಯುವಾಗಲೂ ಒಬ್ಬರೆ. ಪಕ್ಷದ ವಿಚಾರ ಬಂದಾಗ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ಈ ಬಗ್ಗೆ ಚಿಂತೆ ಬೇಡ ಎಂದು ತಿಳಿಸಿದ್ದಾರೆ.

ಈ ವಾರ ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಯಲಿದೆಯೇ ಎಂದು ಪ್ರಶ್ನಿಸಿದಾಗ, ನಾನು ಸರ್ವಪಕ್ಷ ಸಭೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತಿದ್ದೇನೆ. ಸಂಸತ್ ಅಧಿವೇಶನ ಆರಂಭವಾಗಿದ್ದು, ರಾಜ್ಯದ ಹಿತರಕ್ಷಣೆ ವಿಚಾರವಾಗಿ ಸಂಸದರಿಗೆ ಕೆಲವು ಜವಾಬ್ದಾರಿಗಳ ಬಗ್ಗೆ ಹೇಳಬೇಕಿದೆ ಎಂದು ಹೇಳಿದರು.

ನಂತರ ಉತ್ತರ ಪ್ರದೇಶ ಸಂಸದ ರಾಜೀವ್ ರಾಯ್ ಎಂಬುವವರು ನಿನ್ನೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಎಕ್ಸ್ ಖಾತೆಯಲ್ಲಿ ಸಿಎಂ ಅವರನ್ನು ಟ್ಯಾಗ್ ಮಾಡಿ ಇದು ಅತ್ಯಂತ ಕೆಟ್ಟ ಟ್ರಾಫಿಕ್ ಜಾಮ್ ಎಂದು ಬರೆದಿರುವ ಬಗ್ಗೆ ಕೇಳಿದಾಗ, “ಅವರಿಗೆ ನನ್ನನ್ನು ದೆಹಲಿಯಲ್ಲಿ ಭೇಟಿ ಮಾಡಲು ಹೇಳಿ. ದೆಹಲಿಯಲ್ಲಿರುವ ಟ್ರಾಫಿಕ್ ಸಮಸ್ಯೆ ಏನು ಎಂದು ಅವರಿಗೆ ತೋರಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

RELATED ARTICLES
- Advertisment -
Google search engine

Most Popular