ಬೆಂಗಳೂರು: ರಾಜ್ಯದಲ್ಲಿ ದಿಢೀರನೇ ಬದಲಾದ ಹವಾಮಾನ ಹಾಗೂ ದ್ವಿತ್ವ ಚಂಡಮಾರುತದ ಪ್ರಭಾವ ತರಕಾರಿಗಳ ಮೇಲೆ ಬೀರಿದ್ದು ನುಗ್ಗೆಕಾಯಿಯು ಚಿಕನ್ ಮಟನ್‌ಗಿಂತ ದುಬಾರಿಯಾಗಿದೆ. ತರಕಾರಿಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಾಗೂ ತರಕಾರಿ ಸಾಂಬರಿನ ರುಚಿ ಹೆಚ್ಚಿಸುವ ನುಗ್ಗೆಕಾಯಿ ಬೆಲೆ ಕೇಳಿದರೆ ಒಂದು ಕ್ಷಣ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.
ಬರೋಬ್ಬರಿ ಕೆಜಿಗೆ 500 ರೂ.ಗಳಿಂದ 600 ರೂ.ಗಳಿಗೆ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಒಂದಕ್ಕೆ 50 ರೂ.ಗಳಿಂದ 60 ರೂ.ಗಳಂತೆ ಚಿಲ್ಲರೆಯಾಗಿ ಮಾರಾಟವಾಗುತ್ತಿದೆ. ಒಂದು ಕೆಜಿಗೆ 8 ರಿಂದ 10 ತೂಗುತ್ತವೆ. ಮಾರುಕಟ್ಟೆಯಲ್ಲಿ ಕೆಜಿ ಲೆಕ್ಕದಲ್ಲಿ ತಂದು ಕೆಲ ಚಿಲ್ಲರೆ ವ್ಯಾಪಾರಿಗಳು ಲಾಭದ ದೃಷ್ಟಿಯಿಂದ ಬಿಡಿಯಾಗಿ ಮಾರಾಟ ಮಾಡುತ್ತಿದ್ದಾರೆ.
ಮಾರುಕಟ್ಟೆಗಳಲ್ಲಿ ತರಕಾರಿ ಕೊಳ್ಳಲು ಬರುವ ಗ್ರಾಹಕರು ನುಗ್ಗೆಕಾಯಿ ಬೆಲೆ ಕೇಳುತ್ತಿದ್ದಂತೆ ಇದರ ಸಹವಾಸವೇ ಬೇಡ ಎಂದು ದೂರವಾಗುತ್ತಿದ್ದಾರೆ.ಸಾಮಾನ್ಯವಾಗಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನುಗ್ಗೆಕಾಯಿ ಬೆಳೆ ಇಳುವರಿ ಕಡಿಮೆ ಇರುತ್ತದೆ. ಜೊತೆಗೆ ಹವಾಮಾನ ವೈಪರೀತ್ಯದಿಂದಲೂ ಸಹ ಬೆಳೆಯ ಮೇಲೆ ವ್ಯಾಪಕ ಪರಿಣಾಮ ಬೀರಿದ್ದು, ಇಳುವರಿ ಕುಂಠಿತವಾಗಿದೆ. ನೆರೆಯ ತಮಿಳಿನಾಡಿನಿಂದ ಅಪಾರ ಪ್ರಮಾಣದಲ್ಲಿ ಬೆಂಗಳೂರಿಗೆ ಬರುತ್ತಿದ್ದ ನುಗ್ಗೆಕಾಯಿ ಗಣನೀಯವಾಗಿ ಇಳಿಮುಖವಾಗಿದ್ದು, ಮಾರುಕಟ್ಟೆಯೆಲ್ಲಾ ಹುಡುಕಾಡಿದರೂ ನುಗ್ಗೆ ಕಾಣದಂತಾಗಿದೆ.
ಇದರ ಜೊತೆಗೆ ಇತರೆ ತರಕಾರಿಗಳ ಬೆಲೆಯೂ ಸಹ ದುಬಾರಿಯಾಗಿದ್ದು, ಕಳೆದ ಒಂದು ತಿಂಗಳಿನಿಂದಲೂ ಎಲ್ಲಾ ತರಕಾರಿಗಳ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ಎಲ್ಲಾ ತರಕಾರಿಗಳ ಬೆಲೆ 50 ರೂ. ಮೇಲೆಯೇ ಇವೆ.
ಅವರೆಕಾಯಿ ಕೆಜಿಗೆ 60 ರೂ., ಹುರಳಿಕಾಯಿ 80 ರೂ., ಕ್ಯಾರೆಟ್ 80 ರೂ., ಬೀಟರೂಟ್ 60 ರೂ., ಬೆಂಡೆಕಾಯಿ 80 ರೂ., ಟೊಮ್ಯಾಟೊ 50 ರೂ., ಮೆಣಸಿನಕಾಯಿ 80 ರೂ., ಬದನೆಕಾಯಿ 70 ರೂ., ಗಳಿಗೆ ಮಾರಾಟವಾಗುತ್ತಿದ್ದರೆ, ಈರುಳ್ಳಿ 100 ರೂ.ಗಳಿಗೆ 4 ರಿಂದ 5 ಕೆಜಿಗೆ ಚಿಲ್ಲರೆಯಾಗಿ ಮಾರಾಟ ಮಾಡಲಾಗುತ್ತಿದೆ.
ತರಕಾರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಕಳೆದ ಎರಡು ತಿಂಗಳುಗಳಿಂದ ಉತ್ತಮ ಬೆಲೆ ಸಿಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಆದರೆ ವಾತಾವರಣದ ಬದಲಾವಣೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದಿರುವುದರಿಂದ ಬೇಡಿಕೆ ಹೆಚ್ಚಾಗಿದೆ.



