ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಂದು ಮತ್ತೆ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದ್ದು, ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾವು ಯಾವಾಗಲೂ ಒಗ್ಗಟ್ಟಾಗಿದ್ದೇವೆ. ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ. ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಪಕ್ಷದ ವಿಚಾರ ಮತ್ತು ಬೆಳಗಾವಿ ಅಧಿವೇಶನದ ಕುರಿತು ಚರ್ಚಿಸಿದ್ದೇವೆ ಹಾಗೂ ನಮ್ಮದು ಒಂದೇ ಧ್ವನಿ, ಒಂದೇ ಆಚಾರ- ವಿಚಾರ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಮುಂದುವರೆಸಿ 2028ಕ್ಕೂ ನಾವು ಒಟ್ಟಿಗೇ ಕೆಲಸ ಮಾಡುತ್ತೇವೆ. ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ನಾವು ಯಾವಾಗಲೂ ಬ್ರದರ್ಸೇ. ನಮ್ಮದು ಒಂದೇ ವಿಚಾರ- ಸಿದ್ಧಾಂತ ಎಂದಿದ್ದಾರೆ.
ಬ್ರೇಕ್ ಫಾಸ್ಟ್ ಬಳಿಕ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ನಾವು ಇವತ್ತೋ ಮೊನ್ನೆಯೋ ಒಗ್ಗಟ್ಟಾಗಿರುವುದಲ್ಲ. ಯಾವತ್ತೂ ಒಗ್ಗಟ್ಟಾಗಿದ್ದೇವೆ. ಬ್ರೇಕ್ ಫಾಸ್ಟ್ ವೇಳೆ ಪಕ್ಷದ ವಿಚಾರ ಚರ್ಚೆ ಮಾಡಿದ್ದೇವೆ. ಡಿಸೆಂಬರ್ 8 ರಿಂದ ಬೆಳಗಾವಿ ಅಧಿವೇಶನ ಆರಂಭವಾಗುತ್ತದೆ. ಅಧಿವೇಶನ ಹಿನ್ನೆಲೆಯಲ್ಲಿ ನಾವು ಚರ್ಚೆ ಮಾಡಿದ್ದೇವೆ. ವಿಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದ್ದರೂ ಎದುರಿಸಿತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ನಮ್ಮ ಸರ್ಕಾರ ಯಾವಾಗಲು ರೈತರ ಪರ ಇರುತ್ತದೆ. ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಕಾರ್ಖಾನೆ ಮಾಲೀಕರ ಜತೆ ಈಗಾಗಲೇ ಚರ್ಚೆ ಮಾಡಲಾಗಿದೆ. ರಾಜ್ಯದ ಸಮಸ್ಯೆ ಬಗ್ಗೆಯೂ ನಾನು ಡಿಸಿಎಂ ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಈ ಬಾರಿ ರೈತರು ಹೆಚ್ಚು ಮೆಕ್ಕೆಜೋಳ ಬೆಳೆದಿದ್ದಾರೆ ಎಂದು ಸಿಎಂ ತಿಳಿಸಿದರು.
ಈ ನಡುವೆ ನಾವು ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದೇವೆ. ವೇಣುಗೋಪಾಲ್ ಅವರನ್ನು ನಾಳೆ ಮಂಗಳೂರಿನಲ್ಲಿ ಭೇಟಿಯಾಗುತ್ತೇವೆ. ಸಮಯ ಸಿಕ್ಕರೆ ಸಂಪುಟ ವಿಸ್ತರಣೆ ವಿಚಾರ ಚರ್ಚಿಸಲಿದ್ದೇವೆ ಎಂದು ತಿಳಿಸಿದರು.
ನಂತರ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ನಾವು ಒಗ್ಗಟ್ಟಾಗಿ ಸರಕಾರವನ್ನು ಮುನ್ನಡೆಸಲಿದ್ದೇವೆ. ನಮ್ಮ ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದಾರೆ. ಅಭಿಪ್ರಾಯ ವ್ಯಕ್ತಪಡಿಸಿದ ಕೂಡಲೇ ಭಿನ್ನಾಭಿಪ್ರಾಯ ಎಂದರ್ಥವಲ್ಲ ಎಂದರು. ಇದೇ ವೇಳೆ, ನಿಧನರಾದ ಮಾಜಿ ಶಾಸಕ ಆರ್ವಿ ದೇವರಾಜ್ ಅವರಿಗೆ ಸಂತಾಪ ವ್ಯಕ್ತಪಡಿಸಿದರು. ಅವರ ಸಾವಿನಿಂದ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಹೇಳಿದರು.
ಹಾಗೂ ಡಿಕೆ ಶಿವಕುಮಾರ್ ನಾವಿಬ್ಬರೂ ಬ್ರೇಕ್ಫಾಸ್ಟ್ ಸವಿದಿದ್ದು, ಸಿಎಂ ಅವರಿಗೆ ಅವರದೇ ಆದ ಮೈಸೂರಿನ ಉಪಾಹಾರವನ್ನು ಒದಗಿಸಿದ್ದೇನೆ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷದ ವಿಚಾರ, ಎಂಎಲ್ಸಿಗಳನ್ನು ಆಯ್ಕೆ ಮಾಡುವ ವಿಚಾರವನ್ನು ಜೊತೆಯಾಗಿ ಚರ್ಚಿಸಿದ್ದೇವೆ ಎಂದು ನುಡಿದರು. ಅವರೂ ಆರ್ವಿ ದೇವರಾಜ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.



