ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಇಂಡಿಯಾ ಬ್ಯಾಂಕ್ ಎಟಿಎಂ ಯಂತ್ರವನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಇಂದು ಮಂಗಳವಾರ ತಿಳಿಸಿದ್ದಾರೆ.
ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಕಿಯೋಸ್ಕ್‌ನಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು, ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದೆ ಎಂದು ಅವರು ಹೇಳಿದರು.
ದುಷ್ಕರ್ಮಿಗಳು ಎಟಿಎಂ ಯಂತ್ರವನ್ನು ಕಿಯೋಸ್ಕ್‌ನಿಂದ ಹೊರತೆಗೆದುಕೊಂಡು ಬಂದು, ಅದನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಸುಮಾರು 200 ಮೀಟರ್ ದೂರ ತಳ್ಳಿಕೊಂಡು ಹೋಗಿದ್ದಾರೆ. ಬಳಿಕ ತಮ್ಮ ವಾಹನದಲ್ಲಿ ಯಂತ್ರವನ್ನು ಇರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯ ಒಂದರಲ್ಲಿ, ಇಬ್ಬರು ವ್ಯಕ್ತಿಗಳು ಖಾಲಿ ಗಾಡಿಯನ್ನು ಕಿಯೋಸ್ಕ್ ಕಡೆಗೆ ತಳ್ಳಿಕೊಂಡು ಬರುತ್ತಿರುವುದು ಕಂಡುಬಂದಿದೆ.
ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ, 1 ಲಕ್ಷ ರೂ.ಗೂ ಹೆಚ್ಚು ಹಣ ಹೊಂದಿದ್ದ ಯಂತ್ರವನ್ನು ಶಂಕಿತರು ತೆರೆಯಲು ಯತ್ನಿಸಿದ್ದಾರೆ. ಆದರೆ, ವಿಫಲವಾದಾಗ ಕೆಲವು ಮೀಟರ್ ದೂರದಲ್ಲಿ ಅದನ್ನು ಬಿಟ್ಟು ಹೋಗಿದ್ದಾರೆ. ನಂತರ ಅದನ್ನು ವಶಪಡಿಸಿಕೊಳ್ಳಲಾಗಿದ್ದು, ನಗದು ಹಾಗೆಯೇ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



