ಮಂಗಳೂರು (ದಕ್ಷಿಣ ಕನ್ನಡ): ಕಾರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಿದ ಆರೋಪದಡಿಯಲ್ಲಿ ಇಬ್ಬರು ಯುವಕರನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಬಂಧಿತರನ್ನುಆಶಿಕ್ ಪಾಷಾ ಹಾಗೂ ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ.

ವಾಹನವೊಂದರಲ್ಲಿ ಗೋವುಗಳನ್ನು ಸಾಗಿಸುವ ವೇಳೆ ಈ ವಾಹನ ರಸ್ತೆಯಲ್ಲಿ ಕೆಟ್ಟುಹೋಗಿತ್ತು. ಹೀಗಾಗಿ ವಾಹನದಲ್ಲಿದ್ದ ಗೋವುಗಳನ್ನು ಪುತ್ತೂರು, ನರಿಮೊಗರು ಎಂಬಲ್ಲಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದು, ಅವುಗಳನ್ನು ದೂರುದಾರರು ಸ್ಥಳೀಯರ ಸಹಕಾರದಿಂದ ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿದ್ದರು.
ಗೋವುಗಳನ್ನು ಯಾರೋ ಕಳ್ಳರು ಕದ್ದು ತಂದಿರಬಹುದೆಂದು ಸಂಶಯವಿದ್ದು, ಕೃತ್ಯವೆಸಗಿದ ಆರೋಪಿಗಳನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 117/2025, ಕಲಂ: 4, 5 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ ಮತ್ತು ಕಲಂ: 303(1) BNS 2023 ಮತ್ತು 106 BNSS -2023 ರಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದಾಗ ಆಶಿಕ್ ಪಾಷಾ (26) ಹಾಗೂ ಅಬ್ದುಲ್ ಲತೀಫ್ (25) ಎಂಬವರುಗಳು ಕೆಎ 52 4889 ನೋಂದಣಿಯ ಇನ್ನೋವಾ ಕಾರಲ್ಲಿ ಅಕ್ರಮವಾಗಿ 4 ಕರುಗಳನ್ನು ಹಾಗೂ ಒಂದು ದನವನ್ನು ಸಾಗಿಸುವ ವೇಳೆ ವಾಹನ ಹಾಳಾಗಿದ್ದರಿಂದ ಆರೋಪಿಗಳು ಜಾನುವಾರುಗಳನ್ನು ರಸ್ತೆಯಲ್ಲಿ ಬಿಟ್ಟು ವಾಹನದೊಂದಿಗೆ ತೆರಳಿರುವುದು ತಿಳಿದುಬಂದಿದೆ. ಸದ್ಯ ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



