ಬೆಂಗಳೂರು: ಕೋಡಿಮಠದ ಶ್ರೀಗಳು ತಮ್ಮ ಭವಿಷ್ಯವಾಣಿಗಳಿಗೆ ಹೆಸರುವಾಸಿ. ರಾಜ್ಯ-ದೇಶ-ಜಾಗತಿಕ ಮಟ್ಟದ ರಾಜಕೀಯ ಭವಿಷ್ಯವನ್ನು, ವಾತಾವರಣದ ಪಲ್ಲಟವನ್ನೂ ಅಲ್ಲದೇ ಒಳಿತು-ಕೆಡುಕುಗಳ ಮುನ್ಸೂಚನೆಯನ್ನು ತಮ್ಮ ಒಗಟಿನಂತಹ ಮಾತುಗಳಲ್ಲಿ ಕಟ್ಟಿಕೊಡುವ ಶ್ರೀಗಳು ಈಗ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಂಗಳವಾರ ಕೆ.ಆರ್. ಪೇಟೆಯಲ್ಲಿ ಮಾಧ್ಯಮಗಳೊಡನೆ ಮಾತನಾಡಿದ ಅವರು ಜನವರಿ 2026ರ ಸಂಕ್ರಾಂತಿಯ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದ್ದು, ನಾಯಕತ್ವದ ಗೊಂದಲಕ್ಕೆ ತೆರೆಬೀಳಲಿದೆ ಎಂದಿದ್ದಾರೆ.
ಇದಲ್ಲದೇ ಈ ಕುರಿತು “ಶಿವನ ಮುಡಿ ಸೇರಿದ ಹೂವು ಶಿವನ ಪಾದಕ್ಕೆ ಬೀಳಲೇಬೇಕು” ಎಂಬ ಭವಿಷ್ಯ ನುಡಿದಿರುವ ಶ್ರೀಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಪಟ್ಟ ಖಚಿತ ಎಂಬ ಮಾತುಗಳನ್ನಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಗೃಹ ಸಚಿವ ಜಿ. ಪರಮೇಶ್ವರ್ ಕೋಡಿಮಠಕ್ಕೆ ತೆರಳಿ ಶ್ರೀಗಳೊಡನೆ ಚರ್ಚೆ ನಡೆಸಿದ್ದು, ನಂತರ ಅವರು ನೀಡಿರುವ ಈ ಭವಿಷ್ಯ ರಾಜ್ಯ ರಾಜಕಾರಣದ ಪಾಳಯದಲ್ಲಿ ಸಂಚಲನ ಉಂಟುಮಾಡಿದೆ ಎನ್ನಲಾಗಿದೆ.
ಕಳೆದ ಐದು ತಿಂಗಳಿಂದ ಇದೇ ಮಾತನ್ನು ಹೇಳುತ್ತಿರುವ ಸ್ವಾಮಿಗಳು, ಇದೇನು ಮೊದಲ ಬಾರಿ ಪಟ್ಟ ಬದಲಾವಣೆಯ ಕುರಿತು ಶ್ರೀಗಳು ನುಡಿದಿಲ್ಲ. ಬದಲಾಗಿ ಕಳೆದ ಜೂನ್‌ನಲ್ಲಿ ಸಂಕ್ರಾಂತಿಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತೆ ಹಾಗೂ ಅಕ್ಟೋಬರ್ 1ನೇ ತಾರೀಕು 2026ರ ಸಂಕ್ರಾಂತಿಯವರೆಗೆ ಸಿದ್ದರಾಮಯ್ಯನವರ ಪಟ್ಟಕ್ಕೆ ಯಾವುದೇ ತೊಂದರೆ ಇಲ್ಲ, ಅದಾದ ಮೇಲೆ ರಾಜಕೀಯ ವಿಪ್ಲವ ಉಂಟಾಗಿ ಪಟ್ಟ ಬದಲಾಗುವುದು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದಷ್ಟೇ ಅಲ್ಲದೇ ರಾಷ್ಟ್ರ ರಾಜಕಾರಣದ ಬಗ್ಗೆಯೂ ಶ್ರೀಗಳು ಗಂಭೀರ ವಿಷಯಗಳನ್ನು ಮಾತನಾಡಿದ್ದು, ಈ ಯುಗಾದಿಯ ನಂತರ ಕೇಂದ್ರದಲ್ಲಿ ಸಮಸ್ಯೆಗಳು ಉಲ್ಬಣವಾಗಲಿವೆ. ದೆಹಲಿಯಲ್ಲಿ ನಡೆದಂತಹ ಬಾಂಬ್ ಸ್ಫೋಟಗಳು ಇನ್ನೂ ಅನೇಕ ಅಹಿತಕರ ಘಟನೆಗಳು ಮುಂದಿನ ಸಂವತ್ಸರದಲ್ಲಿ ಉಂಟಾಗಲಿವೆ ಎಂದಿದ್ದಾರೆ.
ಒಟ್ಟಾರೆಯಾಗಿ ರಾಜ್ಯಕ್ಕೆ ಜಾಗತಿಕ ಹೊಸ ವರ್ಷದಲ್ಲಿ ಬದಲಾವಣೆ ಪರ್ವ ಆರಂಭವಾಗಲಿದ್ದು, ಹಿಂದೂ ಹೊಸ ವರ್ಷವಾದ ಯುಗಾದಿಯಿಂದ ದೇಶದ ರಾಜಕಾರಣದಲ್ಲಿ ಸಮಸ್ಯೆಗಳಾಗಿ ಕೆಲವೊಂದು ಅಹಿತಕರ ಘಟನೆ ನಡೆಯಲಿವೆ ಎಂದು ತಿಳಿಸಿದ್ದಾರೆ.



