ಬಿಹಾರ : ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿ ಭರದಿಂದ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದಲ್ಲಿ ಒಂದು ಅಭೂತಪೂರ್ವ ಘಟನೆಗೆ ವೇದಿಕೆ ಸಿದ್ಧಗೊಂಡಿದೆ.
ಪಾಟ್ನಾದ ಮಹಾವೀರ ಮಂದಿರ ಟ್ರಸ್ಟ್ ನಿರ್ಮಿಸುತ್ತಿರುವ ಈ ದೇವಾಲಯವು 1,080 ಅಡಿ ಉದ್ದ ಮತ್ತು 540 ಅಡಿ ಅಗಲವಿರಲಿದ್ದಯ, ಇದು ಒಟ್ಟು 22 ಪ್ರತ್ಯೇಕ ದೇವಾಲಯಗಳು ಮತ್ತು 18 ಭವ್ಯ ಗೋಪುರಗಳನ್ನು ಒಳಗೊಂಡಿರುವ ಒಂದು ಬೃಹತ್ ಸಂಕೀರ್ಣವಾಗಿದೆ. ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗುವ ನಿರೀಕ್ಷೆಯಲ್ಲಿದ್ದು, ಈ ಭವ್ಯ ದೇವಸ್ಥಾನದಲ್ಲಿಯೇ ವಿಶ್ವದಲ್ಲೇ ಅತಿದೊಡ್ಡ ಏಕಶಿಲಾ ಗ್ರಾನೈಟ್ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ ಈ ಶಿವಲಿಂಗವು ತನ್ನ ಗಾತ್ರ ಮತ್ತು ತೂಕದಿಂದಾಗಿ ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದು, ಇದು ಬರೋಬ್ಬರಿ 33 ಅಡಿ ಎತ್ತರ ಮತ್ತು 210 ಮೆಟ್ರಿಕ್ ಟನ್ ತೂಕವನ್ನು ಹೊಂದಿದೆ ಹಾಗೂ ಇದರ ಮಹತ್ವದ ವೈಶಿಷ್ಟ್ಯವೆಂದರೆ, ಇದನ್ನು ಒಂದೇ ಒಂದು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಲಿದ್ದು, ಇಷ್ಟು ದೊಡ್ಡ ಗಾತ್ರದ ಮತ್ತು ಒಂದೇ ಶಿಲೆಯಿಂದ ಕೆತ್ತಿದ ಶಿವಲಿಂಗವು ವಿಶ್ವದಲ್ಲಿ ಮತ್ತೊಂದಿಲ್ಲ ಎಂದು ಹೇಳಲಾಗುತ್ತಿದೆ.
ಈ ಐತಿಹಾಸಿಕ ಶಿವಲಿಂಗವನ್ನು ತಮಿಳುನಾಡಿನ ಮಹಾಬಲಿಪುರಂ ಬಳಿಯ ಪಟ್ಟಿಕಾಡು ಪ್ರದೇಶದಲ್ಲಿ ಕಳೆದ 10 ವರ್ಷಗಳ ಕಠಿಣ ಶ್ರಮದ ಮೂಲಕ ಕೆತ್ತಲಾಗಿದ್ದು, ಅಗಾಧ ಗಾತ್ರವಿರುವುದರಿಂದ ಶಿವಲಿಂಗವನ್ನು ಸಾಗಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದನ್ನು ಒಟ್ಟು 96 ಚಕ್ರಗಳಿರುವ ಬೃಹತ್ ಹೈಡ್ರಾಲಿಕ್ ಟ್ರೇಲರ್‌ನಲ್ಲಿ ಲೋಡ್ ಮಾಡಲಾಗಿದ್ದು, ತಮಿಳುನಾಡಿನಿಂದ ಬಿಹಾರದ ಚಂಪಾರಣ್ಯದವರೆಗಿನ ಈ ಸುದೀರ್ಘ ಪ್ರಯಾಣವು ಸುಮಾರು 20 ರಿಂದ 25 ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಈ ಸಾಗಾಣಿಕೆಯು ರಸ್ತೆ ಮಾರ್ಗದಲ್ಲಿ ಭಾರೀ ಕುತೂಹಲ ಮತ್ತು ಗಮನವನ್ನು ಸೆಳೆಯುತ್ತಿದೆ ಎಂದಿದ್ದಾರೆ.



