ಮಾಸ್ಕೋ/ವಾಷಿಂಗ್ಟನ್ : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಸಮಾಲೋಚಕರ ನಡುವೆ ಸರಿ ಸುಮಾರು ಐದು ಗಂಟೆಗೂ ಅಧಿಕ ಸಮಯ ರಷ್ಯಾ-ಉಕ್ರೇನ್ ಶಾಂತಿ ಒಪ್ಪಂದದ ಕುರಿತು ನಡೆದ ಮಾತುಕತೆಯ ಹೊರತಾಗಿಯೂ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಶಾಂತಿ ಒಪ್ಪಂದ ಅಂತಿಮಗೊಳಿಸಲು ವಿಫಲವಾಗಿದೆ.
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅಮೆರಿಕಾ ಪ್ರಸ್ತಾಪಿಸಿದ್ದ ಶಾಂತಿ ಒಪ್ಪಂದಕ್ಕೆ ರಷ್ಯಾ ಸಮ್ಮತಿ ಸೂಚಿಸಿಲ್ಲ, ಬದಲಾಗಿ ಉಕ್ರೇನ್‍ನ ಕೆಲ ಭಾಗಗಳು ರಷ್ಯಾಗೆ ಬರಬೇಕು ಅವುಗಳನ್ನು ಬಿಟ್ಟುಕೊಡಬೇಕು ಅಲ್ಲಿಯ ತನಕ ಯಾವುದೇ ಒಪ್ಪಂದಕ್ಕೆ ಒಪ್ಪಿಕೊಳ್ಳುವುದಿಲ್ಲ ಎಂದು ರಷ್ಯಾದ ವಕ್ತಾರರು ತಿಳಿಸಿದ್ದಾರೆ. ಅಮೆರಿಕಾ ಮತ್ತು ರಷ್ಯಾ ನಡುವೆ ಹಿರಿಯ ಅಧಿಕಾರಿಗಳ ನಡೆಸಿದ ಮಾತುಕತೆಗಳು ಉಕ್ರೇನ್ ಶಾಂತಿ ಒಪ್ಪಂದ ಅಂತಿಮಗೊಳಿಸುವಲ್ಲಿ ಪರಸ್ಪರ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಕ್ರೆಮ್ಲಿನ್ ವಕ್ತಾರರು ತಿಳಿಸಿದ್ದಾರೆ.
ಇನ್ನೂ ಯುದ್ಧವನ್ನು ಕೊನೆಗೊಳಿಸುವ ಗುರಿ ಹೊಂದಿರುವ ವಾರಗಳ ತೀವ್ರ ರಾಜತಾಂತ್ರಿಕತೆ ಮಾತುಕತೆಯ ನಂತರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜೇರೆಡ್ ಕುಶ್ನರ್ ಮಾತುಕತೆ ಬವೇಲೆ ಹಾಜರಾಗಿದ್ದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಾ ಬೆಂಬಲಿತ ಕರಡು ಶಾಂತಿ ಯೋಜನೆಗೆ ಉಕ್ರೇನ್ ಮತ್ತು ಯುರೋಪ್ ಪ್ರಸ್ತಾಪಿಸಿದ ಬದಲಾವಣೆಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದು, ಯುರೋಪ್ ಯುದ್ಧಕ್ಕೆ ಹೋಗಲು ಬಯಸಿದರೆ ನಾವು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.
ಈ ನಡುವೆ ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳು ಕರಡು ಶಾಂತಿ ಒಪ್ಪಂದವನ್ನು ತಿದ್ದುಪಡಿ ಮಾಡಲು ಅಮೇರಿಕಾದ ಮೇಲೆ ಒತ್ತಡ ಹೇರಿದ್ದು, ಈ ನಿಟ್ಟಿನಲ್ಲಿ ಶ್ವೇತಭವನ ತ್ವರಿತ ಪ್ರಯತ್ನ ನಡೆಸಿದೆ. ಕರಡು ಶಾಂತಿ ಒಪ್ಪಂದ ಮಾಧ್ಯಮಗಳಿಗೆ ಸೋರಿಕೆಯಾದ ನಂತರ ರಷ್ಯಾಕ್ಕೆ ಅನುಕೂಲಕರವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಆ ಯೋಜನೆಯು ಇತ್ತೀಚಿನ ವಾರಗಳಲ್ಲಿ ಹಲವಾರು ಬದಲಾವಣೆಗಳಿಗೆ ಒಳಗಾಗಿದೆ ಎಂದಿದ್ದಾರೆ.



