ಮಂಡ್ಯ: ಹನುಮ ಜಯಂತಿ ಪ್ರಯುಕ್ತ ರಾಜ್ಯದೆಲ್ಲೆಡೆ ಹನುಮ ಭಕ್ತರು ಬಹಳ ವಿಜೃಂಭಣೆಯಿಂದ ಹನುಮ ಜಯಂತಿ ಆಚರಿಸುತ್ತಿದ್ದು, ಸಾವಿರಾರು ಲಕ್ಷಾಂತರ ಭಕ್ತರು ಹನು ಮಾಲೆಯನ್ನ ಧರಿಸಿ ವ್ರತ ಕೈಗೊಂಡಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು, ಚಿಕ್ಕಮಗಳೂರು ಹೀಗೆ ರಾಜ್ಯದ ಹಲವು ಕಡೆ ಹನುಮ ಭಕ್ತರು ಸಂಕೀರ್ತನಾ ಯಾತ್ರೆಯನ್ನ ಆಯೋಜಿಸಿದ್ದಾರೆ.
ಆದರೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮ ಸಂಕೀರ್ತನ ಯಾತ್ರೆ ವೇಳೆ ಹೈಡ್ರಾಮಾ ನಡೆದಿದ್ದು, ಶ್ರೀರಂಗಪಟ್ಟಣದ ಜಾಮೀಯ ಮಸೀದಿ ಬಳಿ ಸಂಕೀರ್ತನ ಯಾತ್ರೆ ಬರುತ್ತಿದ್ದಂತೆ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹನುಮ ಮಾಲಾಧಾರಿಗಳು ಜಾಮೀಯ ಮಸೀದಿ ವೃತ್ತದಲ್ಲಿ ಕುಳಿತು ಹನುಮಾನ್ ಚಾಲಿಸ್ ಪಠಣ ಮಾಡಿದ್ದಾರೆ. ಈ ವೇಳೆ ಕೆಲವರು ಮಸೀದಿಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ತಳ್ಳಾಟ-ನೂಕಾಟ ಉಂಟಾಗಿತ್ತು ಎಂದು ತಿಳಿಸಿದ್ದಾರೆ.
ಸದ್ಯ, ಸಂಕೀರ್ತನ ಯಾತ್ರೆ ಸಮಾಪ್ತಿಯಾಗಿದ್ದು, ಮೂಡಲ ಬಾಗಿಲು ಆಂಜನೇಯನ ದರ್ಶನ ಪಡೆದ ಹನುಮ ಮಾಲಾಧಾರಿಗಳು, ಶ್ರೀರಂಗನಾಥ ದೇಗುಲದ ಆವರಣದಲ್ಲಿ ಮಾಲೆ ವಿಸರ್ಜನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿವಾದಿತ ಮಸೀದಿ ವೃತ್ತದಿಂದ ಸಂಕೀರ್ತನ ಯಾತ್ರೆ ಮುಂದೆ ಸಾಗಿದ ಹಿನ್ನೆಲೆ, ಪೊಲೀಸರು ಮತ್ತು ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೂ ಈ ಬಗ್ಗೆ ಗೃಹಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ, ಪ್ರತಿ ಬಾರಿಯಂತೆ ಈ ಬಾರಿಯೂ ಭಜನೆ ಮಾಡಿದ್ದಾರೆ, ಮಸೀದಿ ಮುಂಭಾಗ ಭಜನೆ ಮಾಡಿದ್ದಾರೆ, ಮಂಡ್ಯದ ಎಸ್ಪಿ ಜೊತೆ ಮಾತನಾಡಿದ್ದೇನೆ, ಮಸೀದಿ ಎದುರು ಭಜನೆ ಮಾಡೋದು ಅವರು ಮಾಡಿದ ಪದ್ಧತಿ, ಅದೇ ರೀತಿಯಾಗಿ ಭಜನೆ ಮಾಡಿದ್ದಾರೆ ಅಷ್ಟೇ, ಅಲ್ಲಿ ಯಾವುದೇ ಗಲಾಟೆಗಳು ಆಗಿಲ್ಲ, ಕಾರ್ಯಕರ್ತರು ಜಾಸ್ತಿ ಸಂಖ್ಯೆಯಲ್ಲಿ ನೆರೆದಿದ್ದರು ಎಂದು ಹೇಳಿದ್ದಾರೆ.
ಇತ್ತ, ಹನುಮ ಜಯಂತಿ ಪ್ರಯುಕ್ತ ಕೊಪ್ಪಳದಲ್ಲೂ ಹನುಮ ಸಂಕೀರ್ತನ ಯಾತ್ರೆ ನಡೆದಿದ್ದು, ಗಂಗಾವತಿಯಲ್ಲಿ ಸಾವಿರಾರು ಹನುಮ ಮಾಲಾಧಾರಿಗಳು ಸಂಕಿರ್ತನ ಯಾತ್ರೆ ಪಾಲ್ಗೊಂಡಿದ್ದಾರೆ. ಅಂಜನಾದ್ರಿ ಬೆಟ್ಟದಲ್ಲಿ ಮಾಲಾಧಾರಿಗಳು ಹನುಮ ಮಾಲೆಯನ್ನ ವಿಸರ್ಜನೆ ಮಾಡಲಿದ್ದಾರೆ. ಸಂಕೀರ್ತನ ಯಾತ್ರೆ ಬಳಿಕ ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಧಾರ್ಮಿಕ ಸಭೆ ಹಮ್ಮಿಕೊಳ್ಳಲಾಗಿದ್ದು, ಸಭೆಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ನೂರಾರು ಹನುಮಮಾಲಾಧಾರಿಗಳು ಭಾಗಿಯಾಗಿದ್ದರು.
ಮತ್ತೊಂದೆಡೆ, ಚಿಕ್ಕಮಗಳೂರಿನಲ್ಲಿ ದತ್ತಾತ್ರೇಯ ಸ್ವಾಮಿ ವಿಗ್ರಹದೊಂದಿಗೆ ಶೋಭಾಯಾತ್ರೆ ನಡೆದಿದೆ. ಶೋಭಾಯಾತ್ರೆಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ , ಶಾಸಕ ಸಿ.ಟಿ ರವಿ ಭಾಗಿಯಾಗಿದ್ದಾರೆ. ನಗರದ ಬಸವನಹಳ್ಳಿ, ಎಂ.ಸಿ ರಸ್ತೆ ಮೂಲಕ ಆಜಾದ್ ಪಾರ್ಕ್ವರೆಗೂ ಬೃಹತ್ ಶೋಭಯಾತ್ರೆ ಸಾಗಲಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಶೋಭಾಯಾತ್ರೆಗೆ ಜನರು ಆಗಮಿಸಿದ್ದಾರೆ. ಈ ವೇಳೆ ಡಿಜೆ ಸದ್ದಿಗೆ ಯುವಕ ಯುವತಿಯರು ಕುಣಿದು ಕುಪ್ಪಳಿಸಿದ್ದು, ಶಾಸಕ ಸಿ.ಟಿ ರವಿ ಅವರು ಕೂಡ ವಾದ್ಯಗಳ ಸದ್ದಿಗೆ ಹೆಜ್ಜೆ ಹಾಕಿದ್ದಾರೆ.



