Thursday, December 4, 2025
Google search engine

Homeರಾಜ್ಯಸುದ್ದಿಜಾಲಜಿಲ್ಲಾ ರಚನೆಗೆ ಆಗ್ರಹ: ಗೋಕಾಕ ಬಂದ್‌ ಯಶಸ್ವಿ.

ಜಿಲ್ಲಾ ರಚನೆಗೆ ಆಗ್ರಹ: ಗೋಕಾಕ ಬಂದ್‌ ಯಶಸ್ವಿ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ‘ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಅನ್ನು ಕೇಂದ್ರವಾಗಿಸಿ ಹೊಸ ಜಿಲ್ಲೆ ರಚಿಸಬೇಕು. ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಬುಧವಾರ ಕರೆ ನೀಡಿದ್ದ ಗೋಕಾಕ ಬಂದ್‌ ಯಶಸ್ವಿಯಾಯಿತು.

ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ಹಾಗೂ ವಕೀಲರ ಸಂಘದ ನೇತೃತ್ವದಲ್ಲಿ ಮೆರವಣಿಗೆ ನಡೆಸಿ, ಧರಣಿ ಮಾಡಲಾಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರೂ ಬಂದ್‌ಗೆ ಬೆಂಬಲ ನೀಡಿದರು.
ಮಾರುಕಟ್ಟೆ ಹಾಗೂ ಮುಖ್ಯರಸ್ತೆಗಳಲ್ಲಿ ಅಂಗಡಿಗಳು, ಬಸ್, ಖಾಸಗಿ ವಾಹನಗಳ ಸಂಚಾರ ಬಂದ್‌ ಆಗಿತ್ತು. ಶಾಲೆ, ಬ್ಯಾಂಕ್, ಔಷಧ ಮಳಿಗೆ, ಆಸ್ಪತ್ರೆಗಳು ಕಾರ್ಯನಿರ್ವಹಿಸಿದವು.
ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಹಲವು ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

‘ಚಿಕ್ಕೋಡಿ ಜಿಲ್ಲೆ ರಚನೆ ಕೋರಿ ಸ್ವಾಮೀಜಿಗಳ ನಿಯೋಗ’
ಚಿಕ್ಕೋಡಿ: ‘ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಕೇಂದ್ರವಾಗಿ ಹೊಸ ಜಿಲ್ಲೆ ಘೋಷಿಸಲು ಆಗ್ರಹಿಸಿ ಚಳಿಗಾಲದ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಸ್ವಾಮೀಜಿಗಳ ನಿಯೋಗ ಕರೆದೊಯ್ಯಲಾಗುವುದು’ ಎಂದು ನಿಡಸೋಶಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಜಿಲ್ಲಾ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ನಡೆದ ಮಠಾಧೀಶರ ಸಭೆಯಲ್ಲಿ ಮಾತನಾಡಿದ ಅವರು ‘ಬೆಳಗಾವಿ ಜಿಲ್ಲೆಯ ಜನಸಂಖ್ಯೆ 60 ಲಕ್ಷಕ್ಕೂ ಹೆಚ್ಚಿದೆ. ಇದನ್ನು ವಿಭಜನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರೇ ಸಾಕಷ್ಟು ಬಾರಿ ಹೇಳಿದ್ದಾರೆ’ ಎಂದರು.
ಬೆಳವಿಯ ಶರಣಬಸವ ದೇವರು ಜೋಡಕುರಳಿಯ ಚಿದ್ವನಾನಂದ ಸ್ವಾಮೀಜಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಬೆಲ್ಲದ ಬಾಗೇವಾಡಿಯ ಶಿವಾನಂದ ಸ್ವಾಮೀಜಿ ಬೆಂಡವಾಡದ ಗುರುಸಿದ್ಧ ಸ್ವಾಮೀಜಿ ಆಡಿಯ ಸಿದ್ದೇಶ್ವರ ಸ್ವಾಮೀಜಿ ಕಮತೇನಟ್ಟಿಯ ಗುರುದೇವ ದೇವರು ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ ಡೋಣವಾಡದ ಶಿವಾನಂದ ಸ್ವಾಮೀಜಿ ಖಡಕಲಾಟದ ಶಿವಬಸವ ಸ್ವಾಮೀಜಿ ಕಟ್ಟೂರಿನ ರೇವಣಸಿದ್ದೇಶ್ವರ ಸ್ವಾಮೀಜಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಗೌರವಾಧ್ಯಕ್ಷ ರುದ್ರಪ್ಪ ಸಂಗಪ್ಪಗೋಳ ಇದ್ದರು.

RELATED ARTICLES
- Advertisment -
Google search engine

Most Popular