ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಏಕದಿನ ಪಂದ್ಯದ ನಡುವೆ ಕನ್ನಡ ಪದಗಳು ಪ್ರೇಕ್ಷಕರ ಗಮನ ಸೆಳೆದ ಅಪರೂಪದ ಘಟನೆ ನಡೆದಿದೆ. ಭಾರತ ಏಕದಿನ ತಂಡದಲ್ಲಿ ಇಬ್ಬರು ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಅವರು ಆಡುತ್ತಿದ್ದು, ಭಾರತ ತಂಡದಲ್ಲಿ ಕನ್ನಡಿಗರು ಆಡಿದಾಗ ಅವರು ಕನ್ನಡಿದಲ್ಲಿಯೇ ಮಾತನಾಡುತ್ತಾರೆ.
ಈ ಮೊದಲು ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಬಿನ್ ಉತ್ತಪ್ಪ, ರಾಹುಲ್ ದ್ರಾವಿಡ್, ಮನೀಷ್ ಪಾಂಡೆ ಸೇರಿದಂತೆ ಭಾರತ ತಂಡದಲ್ಲಿ ಅನೇಕ ಕನ್ನಡಿಗರು ಆಡಿ ಹೋಗಿದ್ದಾರೆ. ಅವರು ತಂಡದಲ್ಲಿ ಆಡುವಾಗ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಅದರಂತೆ ರಾಯ್ಪುರದಲ್ಲಿ ಬುಧವಾರ ನಡೆದಿದ್ದ ಎರಡನೇ ಪಂದ್ಯದಲ್ಲಿಯೂ ಇದೇ ದೃಶ್ಯ ಕಂಡು ಬಂದಿದೆ.
ಶಾಹೀದ್ ವೀರ್ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಚೇಸಿಂಗ್ ವೇಳೆ, ವಿಕೆಟ್ ಕೀಪರ್ ಕಾರ್ಯನಿರ್ವಹಿಸುತ್ತಿದ್ದ ಕೆಎಲ್ ರಾಹುಲ್, ಬೌಲ್ ಮಾಡುತ್ತಿದ್ದ ಪ್ರಸಿದ್ಧ್ ಕೃಷ್ಣ ಅವರಿಗೆ ಕನ್ನಡದಲ್ಲಿ ಸಂವಹನ ಮಾಡುತ್ತಿದ್ದರು. ಪ್ರಸಿದ್ಧ್ ಕೃಷ್ಣ ಫೀಲ್ಡಿಂಗ್ ವೇಳೆ ರಾಹುಲ್, ‘ಬಾ…ಬಾ…ಬಾ…..ಬಾ….ಬೇಗ, ಬಾ…’ ಎಂದು ಕರೆದಿದ್ದರು.
ನಂತರ ಪ್ರಸಿದ್ಧ್ ಕೃಷ್ಣ ಅವರು ಬೌಲಿಂಗ್ ವೇಳೆ ಸಿಕ್ಸರ್ ಹಾಗೂ ಬೌಂಡರಿ ಮೂಲಕ ಹೆಚ್ಚಿನ ರನ್‌ಗಳನ್ನು ನೀಡುತ್ತಿದ್ದ ವೇಳೆ ಕೆಎಲ್ ರಾಹುಲ್, ಒತ್ತಡಕ್ಕೆ ಒಳಗಾಗಿದ್ದ ಪ್ರಸಿದ್ಧ್ ಕೃಷ್ಣಗೆ ಕಿವಿ ಮಾತು ಹೇಳಿದರು.
ಕೆಎಲ್ ರಾಹುಲ್: ಪ್ರಸಿದ್ಧ್, ನೀನು ತಲೆ ಓಡಿಸಬೇಡ, ನಾನ್ ಹೇಳಿದ್ ಹಾಕು, ಹೇಳಿದೀನಿ ಏನ್ ಹಾಕಬೇಕು ಅಂತ; ಅದನ್ನ ಹಾಕು.
ಪ್ರಸಿದ್ಧ್ ಕೃಷ್ಣ: ತಲೆಗೆ ಹಾಕ್ಲಾ?
ಕೆಎಲ್ ರಾಹುಲ್: ತಲೆಗೆ ಎಲ್ಲಾ ಬೇಡ ಈಗ. ಹೇಳಿ ಬಂದಿದ್ದೀನಿ ತಲೆಗೆ ಹಾಕಬೇಡ ಅಂತ ಮಗಾ
ಇದು ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಅವರು ನಡೆಸಿದ ಕನ್ನಡದಲ್ಲಿನ ಸಂವಹನ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಕಾಮೆಂಟರಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ವಿಜಯ್ ಭಾರಧ್ವಾಜ್ ಅವರು ಮಾತನಾಡುತ್ತಾ, ಪ್ರಸಿದ್ಧ್ ಕೃಷ್ಣಗೆ ಕೆಎಲ್ ರಾಹುಲ್ ಕನ್ನಡದಲ್ಲಿ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಈ ಕಾರಣದಿಂದಲೇ ಅವರು ಪ್ರಸಿದ್ಧ್ ಗೆ ನೀನು ಏನು ಮಾಡಬೇಡ ಎನ್ನುತ್ತಿದ್ದಾರೆ ಎಂದರು.
ಅರ್ಧಶತಕ ಗಳಿಸಿದ್ದ ಕೆಎಲ್ ರಾಹುಲ್:
ವಿರಾಟ್ ಕೊಹ್ಲಿ ಹಾಗೂ ಋತುರಾಜ್ ಗಾಯಕ್ವಾಡ್ ಅವರು ಶತಕಗಳನ್ನು ಗಳಿಸಿದ ಬಳಿಕ ನಾಯಕ ಕೆಎಲ್ ರಾಹುಲ್ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಅವರು ಆಡಿದ 43 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಆರು ಬೌಂಡರಿಗಳೊಂದಿಗೆ ಅಜೇಯ 66 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 358 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದರು.
ಇನ್ನು ಪ್ರಸಿದ್ಧ್ ಈ ಪಂದ್ಯದಲ್ಲಿ ದುಬಾರಿಯಾದರು. ಅವರು ಬೌಲ್ ಮಾಡಿದ 8.2 ಓವರ್‌ಗಳಿಗೆ 85 ರನ್ ನೀಡಿ ಎರಡು ವಿಕೆಟ್‌ಗಳನ್ನು ಪಡೆದರು. ಆದರೂ ಭಾರತ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಏಡೆನ್ ಮಾರ್ಕ್ರಮ್ ಶತಕ ಹಾಗೂ ಡೆವಾಲ್ಡ್ ಬ್ರೆವಿಸ್ ಮತ್ತು ಮ್ಯಾಥ್ಯೂ ಬ್ರಿಟ್ಜ್ಸ್ಕಿ ಅವರ ಅರ್ಧಶತಕಗಳ ಬಲದಿಂದ ಹರಿಣ ಪಡೆ ಕೊನೆಯ ಓವರ್‌ನಲ್ಲಿ ದಾಖಲೆಯ ಮೊತ್ತವನ್ನು ಚೇಸ್ ಮಾಡಿ ಗೆದ್ದಿತು. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು 1-1 ಸಮಬಲ ಕಾಯ್ದುಕೊಂಡಿವೆ.



