ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಸ್ಪಿ ಅನ್ಶುಕುಮಾರ್ ನೇತೃತ್ವದಲ್ಲಿ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿದ್ದು, ವ್ಯಸನಿ ಖೈದಿಗಳು ಬೀಡಿ, ಸಿಗರೇಟ್‌ಗಾಗಿ ಪರದಾಡುತ್ತಿದ್ದಾರೆ. ಜೈಲಿನೊಳಗೆ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಬೆಳಕಿಗೆ ಬಂದ ಹಿನ್ನೆಲೆ, ನೂತನ ಎಸ್‌ಪಿ ಅನ್ಶುಕುಮಾರ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಜೈಲಿನೊಳಗೆ ಬರುವ ಬೀಡಿ, ಗಾಂಜಾ, ಸಿಗರೇಟ್, ಮೊಬೈಲ್, ಮದ್ಯ ಸೇರಿದಂತೆ ಎಲ್ಲಾ ರೀತಿಯ ಅಕ್ರಮ ವಸ್ತುಗಳ ಸಾಗಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅಕ್ರಮಗಳಿಗೆ ಇದ್ದ ಎಲ್ಲಾ ದಾರಿಗಳನ್ನು ಮುಚ್ಚಿಸುವಲ್ಲಿ ಎಸ್ಪಿ ಯಶಸ್ವಿಯಾಗಿದ್ದಾರೆ.
ಹೀಗಾಗಿ, ಈ ವ್ಯಸನಗಳಿಗೆ ದಾಸರಾಗಿದ್ದ ಖೈದಿಗಳು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ದೈನಂದಿನ ವ್ಯಸನಗಳನ್ನು ಪೂರೈಸಿಕೊಳ್ಳಲು ಬೀಡಿ, ಸಿಗರೇಟ್ ನೀಡುವಂತೆ ಸಿಕ್ಕ ಸಿಕ್ಕ ಸಿಬ್ಬಂದಿ ಬಳಿ ಅಂಗಲಾಚುತ್ತಿದ್ದಾರೆ.
ಇನ್ನು ಜೈಲಿನೊಳಗೆ ನಡೆಯುತ್ತಿದ್ದ ಮತ್ತೊಂದು ಅಕ್ರಮ ದಂಧೆಗೂ ಎಸ್ಪಿ ಅನ್ಶುಕುಮಾರ್ ಕಡಿವಾಣ ಹಾಕಿದ್ದಾರೆ. ಐಸಿಸ್ ಉಗ್ರ ಶಕೀಲ್ ಹಮೀದ್ ಮನ್ನಾ ಜೈಲಿನೊಳಗೆ ಚಿಕನ್ ಮತ್ತು ಮಟನ್ ಶವರ್ಮಾ ವ್ಯಾಪಾರ ನಡೆಸುತ್ತಿದ್ದ. ಸಂಜೆ ವೇಳೆ ಇತರೆ ಖೈದಿಗಳಿಗೆ ದುಪ್ಪಟ್ಟು ಬೆಲೆಗೆ ಚಿಕನ್ ಮತ್ತು ಮಟನ್ ಶವರ್ಮಾ ಮಾರಾಟ ಮಾಡುತ್ತಿದ್ದನಂತೆ. ಈ ವ್ಯಾಪಾರಕ್ಕಾಗಿ ಉಗ್ರ ಶಕೀಲ್, ಜೈಲು ಅಧಿಕಾರಿಗಳೊಂದಿಗೆ ಶಾಮೀಲಾಗಿ ಹೊರಗಿನಿಂದ ಆಹಾರ ಪದಾರ್ಥಗಳನ್ನು ತರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಶವರ್ಮಾ ಮಾರಾಟದಿಂದ ಬಂದ ಲಾಭದಲ್ಲಿ ಜೈಲಾಧಿಕಾರಿಗಳಿಗೂ ಪಾಲು ನೀಡುತ್ತಿದ್ದ ಎನ್ನಲಾಗಿದೆ. ಆದರೆ, ಈಗ ಎಸ್ಪಿ ಅನ್ಶುಕುಮಾರ್ ಅವರ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದಾಗಿ ಈ ಉಗ್ರನ ಶವರ್ಮಾ ದಂಧೆಗೂ ಸಂಪೂರ್ಣವಾಗಿ ಬ್ರೇಕ್ ಬಿದ್ದಿದೆ.



