ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ದ್ವೇಷ ಭಾಷಣ ತಡೆ ಹಾಗೂ ಸಾಮಾಜಿಕ ಬಹಿಷ್ಕಾರ ತಡೆ ವಿಧೇಯಕ ಒಳಗೊಂಡು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಟ್ಟು 41 ವಿಚಾರವಾಗಿ ಚರ್ಚೆ ಆಗಿದ್ದು, ಈ ಪೈಕಿ ಪ್ರಮುಖ ವಿಧೇಯಕಗಳಿಗೆ ಒಪ್ಪಿಗೆ ಸಿಕ್ಕಿದೆ. ಇದರ ಜೊತೆಗೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ (ತಿದ್ದುಪಡಿ) ವಿಧೇಯಕ-2025ಕ್ಕೆ ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್ ಅವರು, ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ, ಬಯಲುಸೀಮೆ ತಿದ್ದುಪಡಿ ವಿಧೇಯಕ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಧಾರ್ಮಿಕ ದತ್ತಿ ವಿಧೇಯಕ, ಘಾಟಿ ಸುಬ್ರಮಣ್ಯ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಕ್ಕೆ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ವಿಧೇಯಕ-2025 ದಲ್ಲಿ ಯಾವ್ಯಾವುದಕ್ಕೆ ನಿಷೇಧ ಎಂದು ನೋಡುವುದಾದರೆ,
- ಗ್ರಾಮ ಅಥವಾ ಸಮುದಾಯದಿಂದ ಹೊರಹಾಕುವುದು
- ಧಾರ್ಮಿಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ ವಿಧಿಸುವುದು
- ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿ ಮಾಡುವುದು
- ಸಾಮಾಜಿಕ-ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆಯೊಡ್ಡುವುದು
- ವ್ಯವಹಾರ ಅಥವಾ ಉದ್ಯೋಗ ತಿರಸ್ಕಾರ ಮಾಡುವುದು
- ಶಾಲೆ, ಆಸ್ಪತ್ರೆ, ಸಮುದಾಯ ಭವನಗಳ ಪ್ರವೇಶಕ್ಕೆ ತಡೆಯೊಡ್ಡುವುದು
- ಸೇವೆಗಳು, ಅವಕಾಶಗಳನ್ನು ನಿರಾಕರಿಸುವುದು
- ಮದುವೆ, ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುವುದು
- ಸಂಬಂಧ ಕಡಿತಗೊಳಿಸಲು ಪ್ರಚೋದನೆ ನೀಡುವುದು
- ಲಿಂಗತ್ವದ ಆಧಾರದ ಮೇಲೆ ಭೇದ ಮಾಡುವುದು
- ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆಯೊಡ್ಡುವುದು
- ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿ ಪಡಿಸುವುದು
- ಮಾನವ ಹಕ್ಕುಗಳನ್ನು ನಿರಾಕರಿಸುವುದು
- ಬಟ್ಟೆ, ಭಾಷೆ, ಸಾಂಸ್ಕೃತಿಕ ಭೇದ ಎಸಗುವುದು
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕದಲ್ಲೇನಿದೆ ಎನ್ನುವುದಾದರೆ,
- ದ್ವೇಷ ಭಾಷಣವು ಗಂಭೀರ ಅಪರಾಧ ಎಂದು ಸುಪ್ರಿಂ ಕೋರ್ಟ್ ಇತ್ತೀಚೆಗಷ್ಟೇ ವ್ಯಾಖ್ಯಾನಿಸಿತ್ತು
- ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ
- ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ರೆಸಿಡೆನ್ಸ್, ಅಂಗವೈಕಲ್ಯ ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವುದು ಅಪರಾಧ
- ಮೂರು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸಲು ಅವಕಾಶ ಅಥವಾ 5 ಸಾವಿರ ರೂಪಾಯಿವರೆಗೆ ದಂಡ
- ಮೂರು ವರ್ಷ ಶಿಕ್ಷೆ, 5 ಸಾವಿರ ದಂಡ ಎರಡನ್ನೂ ವಿಧಿಸಲು ಅವಕಾಶ
- ದ್ವೇಷ ಭಾಷಣವನ್ನು ಉತ್ತೇಜಿಸುವಂತೆ ಉದ್ದೇಶಪೂರ್ವಕವಾಗಿ ಪ್ರಕಟಿಸುವವರು, ಪ್ರಚಾರ ಮಾಡುವವರು, ಸಮರ್ಥಿಸುವವರನ್ನ ಶಿಕ್ಷೆಗೆ ಗುರಿಪಡಿಸಲು ಅವಕಾಶ
- ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯೂ ಇದರಲ್ಲಿ ಒಳಗೊಂಡಿದೆ
- ದತ್ತಾಂಶ, ಸಂದೇಶ, ಪಠ್ಯ ಚಿತ್ರಗಳು, ಧ್ವನಿ, ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಂಗಳು ಸಾಫ್ಟ್‌ವೇರ್ ಮತ್ತು ಡೇಟಾಬೇಸ್‌ಗಳು ಅಥವಾ ಮೈಕ್ರೋಫಿಲ್ಡ್ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧದ ವ್ಯಾಪ್ತಿಗೆ ಒಳಪಡಿಸುವ ಸಾಧ್ಯತೆ ಇದೆ
- ದ್ವೇಷ ಭಾಷಣ ಪ್ರಸಾರ ಮಾಡುವ ವಾಹಿನಿಗಳು (ಚಾನೆಲ್‌ಗಳು), ಟೆಲಿಕಾಂ ಸೇವಾ ಪೂರೈಕೆದಾರರು, ನೆಟ್ ವರ್ಕ್ ಸೇವಾ ಪೂರೈಕೆದಾರರು, ಇಂಟರ್ ನೆಟ್ ಸೇವಾ ಪೂರೈಕೆದಾರರು, ವೆಬ್‌ಹೋಸ್ಟಿಂಗ್ ಸೇವಾ ಪೂರೈಕೆದಾರರು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸರ್ಚ್ ಇಂಜಿನ್‌ಗಳು ಆನ್‌ಲೈನ್ ಪಾವತಿ ಸೈಟ್‌ಗಳು, ಆನ್‌ಲೈನ್-ಹರಾಜು ಸೈಟ್‌ಗಳು, ಆನ್‌ಲೈನ್-ಮಾರುಕಟ್ಟೆಗಳು ಮತ್ತು ಸೈಬರ್ ಕೆಫೆಗಳನ್ನೂ ಇದರ ವ್ಯಾಪ್ತಿಗೆ ಬರಲಿದೆ ಎಂದು ತಿಳಿಸಿದ್ದಾರೆ.



