Friday, December 5, 2025
Google search engine

Homeರಾಜ್ಯಬೆಳಗಾವಿ ಅಧಿವೇಶನ: ಪ್ರತಿಭಟನೆಗೆ 50 ಸಂಘಟನೆಗಳು ಸಜ್ಜು

ಬೆಳಗಾವಿ ಅಧಿವೇಶನ: ಪ್ರತಿಭಟನೆಗೆ 50 ಸಂಘಟನೆಗಳು ಸಜ್ಜು

ಬೆಳಗಾವಿ : ಡಿ.8 ರಂದು ನಡೆಯಲಿರುವ ಬೆಳಗಾವಿ ಅಧಿವೇಶನಕ್ಕೆ ಸುವರ್ಣಸೌಧದಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿದ್ದು, 6 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಇನ್ನೂ ಬೆಳಗಾವಿ ಸುವರ್ಣಸೌಧದಲ್ಲಿ ಡಿ.೮ ರಿಂದ ೧೯ರ ರವರೆಗೆ ನಡೆಯಲಿರುವ ಚಳಿಗಾಲ ಅಧಿವೇಶನ ವೇಳೆ ಸಾಲು, ಸಾಲು ಪ್ರತಿಭಟನೆಗಳು ನಡೆಯಲಿವೆ. ಈಗಾಗಲೇ ಸುಮಾರು 50ಕ್ಕೂ ಅಧಿಕ ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೋರಿ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೆಸರು ನೊಂದಾಯಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ ಎಂದು ತಿಳಿದು ಬಂದಿದೆ.

ಕಳೆದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಉಂಟಾದ ಘರ್ಷಣೆಯಲ್ಲಿ ಲಾಠಿಚಾರ್ಜ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಈ ರೀತಿಯ ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ಹೆಚ್ಚಿನ ಕ್ರಮವಹಿಸಿದ್ದು ಪ್ರತಿಭಟನೆ ನಡೆಸುವ ಸಂಘಟನೆಗಳಿಗೆ ಕಡಿಮೆ ಜನರನ್ನು ಕರೆದುಕೊಂಡು ಬರುವಂತೆ ಮೊದಲೇ ನಿರ್ದೇಶನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಧಿವೇಶನ ಸಂದರ್ಭದಲ್ಲಿ ಬಿಜೆಪಿ ನೇತೃತ್ವದಲ್ಲಿ ರೈತರ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಇನ್ನೂ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ರಾಜ್ಯ ರೈತ ಸಂಘ ಹೋರಾಟಕ್ಕೆ ಕರೆ ನೀಡಿದೆ. ಅಷ್ಟಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಜನ ಪ್ರತಿಭಟನೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಈ ಬಾರಿ ೬ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಈ ವೇಳೆ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಡಿ.೯ರಂದು ಪ್ರತಿಭಟನೆ ದಿನಾಂಕ ನಿಗದಿಯಾಗಿದ್ದು, ಸುಮಾರು ೨೦ ಸಾವಿರಕ್ಕೂ ಅಧಿಕ ರೈತರನ್ನು ಸೇರಿಸಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜಾಗಿದೆ ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಾಯಕರು ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ ನಡೆಸಿದ್ದಾರೆ ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಉಪಸ್ಥಿತರಿರಲಿದ್ದಾರೆ.

ಅಧಿವೇಶನ ವೇಳೆ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಬಿಜೆಪಿಯಿಂದ ತಲಾ ಒಬ್ಬ ನಾಯಕ ಗ್ರಾಮ ವಾಸ್ತವ್ಯ ಮಾಡಲಿದ್ದು ಜನರ ಸಮಸ್ಯೆಗೆ ಧ್ವನಿಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುವ ಚಿಂತನೆ ನಡೆಸಿದೆ. ಅಧಿವೇಶನ ಸಮಯದಲ್ಲಿ ನಡೆಯುವ ಸಾಲು, ಸಾಲು ಪ್ರತಿಭಟನೆಗೆಂದು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ವರ್ಷ ೬ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆಂದು ನಿಯೋಜಿಸಿದ್ದು, ೬ ಐಪಿಎಸ್ ಅಧಿಕಾರಿಗಳು ಸೇರಿ ೧೬ ಅಧಿಕಾರಿಗಳು ಭದ್ರತೆ ಮೇಲುಸ್ತುವಾರಿ ವಹಿಸಲಿದ್ದಾರೆ. ಜತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕಣ್ಗಾವಲು ಇರಲಿದೆ ಎಂದು ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಭದ್ರತೆ ಆಯೋಜಿಸಿದ್ದು, ಬಾಂಬ್ ಸ್ಪೋಟ ಪ್ರಕರಣ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪೊಲೀಸ್ ಇಲಾಖೆ ಹೆಚ್ಚಿನ ಕಟ್ಟೆಚ್ಚರ ಕೈಗೊಂಡಿದ್ದು ಸುವರ್ಣಸೌಧದ ಸುತ್ತಲೂ ೩ ಕಿ.ಮೀ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಭೋರಸೆ‌ ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular