ಬೆಂಗಳೂರು : ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಅಲ್ಲಿ ಎಲ್ಲಾ ನೀಡಿದ್ದೇನೆ. ನಾನು ಈ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ಇಂದೇ ರಾಜೀನಾಮೆ ನೀಡುವೆ, ಇಲ್ಲವಾದರೆ ಅವರು ರಾಜೀನಾಮೆ ನೀಡುತ್ತಾರಾ… ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಛಲವಾದಿ ನಾರಾಯಣಸ್ವಾಮಿಗೆ ಸವಾಲ್ ಹಾಕಿದ್ದಾರೆ. ಈ ಬಗ್ಗೆ ವಾಚ್ ಕದ್ದದ್ದೋ, ಕೊಂಡದ್ದೋ ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಬಗ್ಗೆ ಡಿಸಿಎಂ ಗುರುವಾರ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ನಾರಾಯಣಸ್ವಾಮಿ ಅವರಿಗೆ ಇನ್ನೂ ಅನುಭವವಿಲ್ಲ. ಯಾವುದಾದರೂ ವಿಚಾರದ ಬಗ್ಗೆ ಮಾತನಾಡಬೇಕಾದರೆ ಕನಿಷ್ಠ ಪರಿಜ್ಞಾನ ಇರಬೇಕು. ಬರೀ ಪ್ರಚಾರಕ್ಕೆ ಮಾತನಾಡುವುದಲ್ಲ. ಅವರಿಗಿಂತ ಹೆಚ್ಚು ಜವಾಬ್ದಾರಿಯಿಂದ ನಾನು ವರ್ತಿಸುತ್ತೇನೆ. ಅವರೂ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಬೇಕು. ಬೇಕಾದರೆ ಅವರೇ ಹೋಗಿ ಲೋಕಾಯುಕ್ತದಲ್ಲಿ ಪರಿಶೀಲನೆ ಮಾಡಲಿ. ಅಲ್ಲಿ ಸಲ್ಲಿಸಿರುವ ಆದಾಯ ಅಫಿಡವಿಟ್ ಸಾರ್ವಜನಿಕ ದಾಖಲೆಯಾಗಿದ್ದು, ಅದನ್ನು ಅವರೂ ಪಡೆಯಬಹುದು ಎಂದು ಹೇಳಿದ್ದಾರೆ.
ಇನ್ನೂ 2018 ಹಾಗೂ 2023ರಲ್ಲಿ ತೋರಿಸಿಲ್ಲ ಎಂಬುದು ಅವರ ವಾದ ಎಂದಾಗ, “ಅವರಿಗೇನು ಗೊತ್ತು? 2025 ರಲ್ಲೂ ಸಲ್ಲಿಕೆ ಮಾಡಿದ್ದೀನಲ್ಲಾ..?” ಎಂದು ತಿಳಿಸಿದ್ದಾರೆ.
ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುತ್ತಾರಂತೆ ಎಂದು ಪ್ರಶ್ನಿಸಿದಾಗ, ಸದನದಲ್ಲೂ ಪ್ರಸ್ತಾಪಿಸಲಿ, ಬೇರೆ ಎಲ್ಲಾದರೂ ಪ್ರಸ್ತಾಪಿಸಲಿ. ಯಾರು ಬೇಡ ಎನ್ನುತ್ತಾರೆ. ದೇಶದೆಲ್ಲೆಡೆ ಚರ್ಚೆ ಮಾಡಲಿ. ನನ್ನ ದಾಖಲೆ ಅವರಿಗೆ ತೋರಿಸುವ ಅಗತ್ಯವಿಲ್ಲವಾದರೂ ನಾನು ಆ ವಾಚ್ ಕದ್ದಿದ್ದೇನೆ ಎಂದು ಹೇಳಿದ್ದಾರಲ್ಲ ಅದಕ್ಕೆ ತೋರಿಸಿರುವೆ ಎಂದು ತಿರುಗೇಟು ನೀಡಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಬೆಳಗ್ಗೆ ಟ್ವೀಟ್ ಮೂಲಕ ನಾರಾಯಣಸ್ವಾಮಿ ಅವರಿಗೆ ತಿರಗೇಟು ನೀಡಿದ ಡಿಕೆಶಿ, “ಮಿಸ್ಟರ್ ನಾರಾಯಣಸ್ವಾಮಿ, ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್! ಜವಾಬ್ದಾರಿಯುತ ಸ್ಥಾನದಲ್ಲಿರೋ ನೀವು ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು ಇದು ನಿಮಗೆ ಘನತೆ ತರುವುದಿಲ್ಲ. ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ. ನನಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ನಮಗೆ ಇಷ್ಟವಾದ ವಾಚ್ ಕಟ್ಟಿಕೊಳ್ಳುವ ಯೋಗ್ಯತೆ ಇಲ್ಲವೇ? ಹಕ್ಕು ಇಲ್ಲವೇ..? “ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ” ಆಡಬೇಡಿ. ನಿಮಗಿರೋ ಸಾಂವಿಧಾನಿಕ ಅಧಿಕಾರ, ಜವಾಬ್ದಾರಿಯನ್ನು ವಿವೇಕದಿಂದ ನಿರ್ವಹಿಸಿ. ಅವಿವೇಕಿಯಂತೆ ಆಡಬೇಡಿ..! ಬೇಕಿದ್ದರೆ ಲೋಕಾಯುಕ್ತ ಕಚೇರಿಗೆ ಹೋಗಿ ನನ್ನ ಅಫಿಡವಿಟ್ ಚೆಕ್ ಮಾಡಿಕೊಳ್ಳಿ” ಎಂದು ಹರಿಹಾಯ್ದಿದ್ದಾರೆ.



