ಮಂಗಳೂರು : ಮಂಗಳೂರಿನ ಬಾರೆಬೈಲ್ನಲ್ಲಿರೋ ವರಾಹ ಪಂಜುರ್ಲಿ ದೈವಸ್ಥಾನದ ಹರಕೆ ನೇಮೋತ್ಸವದಲ್ಲಿ ಗುರುವಾರ ಮದ್ಯರಾತ್ರಿವರೆಗೂ ನಡೆದ ದೈವಕೋಲದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ‘ಕಾಂತಾರ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡಕ್ಕೆ ಸಾಕಷ್ಟು ಅಡೆತಡೆಗಳು ಬಂದಿದ್ದವು. ಈ ವೇಳೆ ನಿರ್ದೇಶಕ ರಿಷಬ್ ಶೆಟ್ಟಿ ಸಾಕಷ್ಟು ಹರಕೆಗಳನ್ನು ಮಾಡಿಕೊಂಡಿದ್ದರು. ಹಾಗಾಗಿ ಮಂಗಳೂರಿಗೆ ಬಂದ ಚಿತ್ರತಂಡ ಹರಕೆ ನೇಮೋತ್ಸವವನ್ನು ನೆರವೇರಿಸಿದೆ.
ಸದ್ಯ ಈ ವೇಳೆ ‘ಕಾಂತಾರ: ಚಾಪ್ಟರ್ 3’ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇಡೀ ವಿಶ್ವಾದ್ಯಂತ ಕರಾವಳಿಯ ದೈವ ಹಾಗೂ ಕೋಲ-ನೇಮೋತ್ಸವದ ಬಗ್ಗೆ ಕಾಂತಾರ ಸಿನಿಮಾ ಪರಿಚಯಿಸಿತ್ತು. ಕನ್ನಡ ಸಿನಿಮಾ ಭಾರತದ ಸಿನಿರಂಗದಲ್ಲೇ ಭಾರೀ ಸದ್ದು ಮಾಡಿತ್ತು. ಆಗ ಎಲ್ಲರಿಗೂ ಕುತೂಹಲಕ್ಕೆ ಕಾರಣವಾಗಿದ್ದ ಕಾಂತಾರ ಚಾಪ್ಟರ್ 1. ಅಂದ್ರೆ ಕಾಂತಾರ ಸಿನಿಮಾದ ಎರಡನೇ ಭಾಗ. ಸದ್ದಿಲ್ಲದೇ ಚಿತ್ರೀಕರಣಗೊಂಡು ಭಾರೀ ಜನಮನ್ನಣೆಗೆ ಕಾರಣವಾಗಿದ್ದು ಕಾಂತಾರ. ಆದರೆ ಕಾಂತಾಯ ಚಾಪ್ಟರ್ 1 ಮಾತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ವಿಘ್ನಗಳನ್ನು ಎದುರಿಸಿತ್ತು.
ಚಿತ್ರೀಕರಣದ ವೇಳೆ ನಡೆದ ಅವಘಡಗಳು, ಅವಾಂತರಗಳು ಚಿತ್ರತಂಡದ ಮೇಲೆ ದೈವಗಳ ಕೋಪ ಕಾರಣ ಎಂದು ಬಿಂಬಿತವಾಗಿತ್ತು. ಆ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಪ್ರೊಡಕ್ಷನ್ ಸಾಕಷ್ಟು ಕಡೆ ಹರಕೆಯನ್ನು ಹೊತ್ತಿತ್ತು. ಅದರಲ್ಲಿ ಒಂದು ಮಂಗಳೂರಿನ ಬಾರೆಬೈಲ್ನಲ್ಲಿ ಇರುವ ದೈವಸ್ಥಾನದಲ್ಲಿ ಹೊತ್ತ ಹರಕೆಯೂ ಒಂದು. ನಿನ್ನೆ ಮೊದಲು ನಡೆದ ಎಣ್ಣೆ ಬೂಳ್ಯ ನೇಮದಲ್ಲಿ ದೈವ ಅಭಯ ನೀಡಿದ್ದು, ನಿನ್ನ ಕಣ್ಣೀರು ಒರೆಸುತ್ತೇನೆ. ನನ್ನ ನುಡಿ ಇದೆ. ಧೈರ್ಯವಾಗಿ ಸಾಗು’ ಎಂದು ರಿಷಬ್ ಮಡಿಲಿನಲ್ಲಿ ಮಲಗಿ ಸಂಪೂರ್ಣ ಆಶೀರ್ವಾದವನ್ನು ನೀಡಿತ್ತು.
ಈ ವೇಳೆ ಚಿತ್ರತಂಡ ವಾರಾಹಿ ಪಂಜುರ್ಲಿ ದೈವದ ನೇಮದಲ್ಲಿ ಭಾಗಿಯಾಗಿತ್ತು. ಪತ್ನಿ-ಮಕ್ಕಳ ಜೊತೆ ರಿಷಬ್ ಶೆಟ್ಟಿ ಭಾಗಿಯಾಗಿದ್ದು, ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಭಾಗಿಯಾಗಿದ್ದರು. ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಕಾಂತಾರ ಚಿತ್ರತಂಡ ಭಾಗಿಯಾಗಿತ್ತು. ಕಳೆದ ಬಾರಿ ‘ಸಿನಿಮಾ ಸಂಸಾರ’ದಲ್ಲಿ ಜಾಗರೂಕತೆಯಿಂದ ಇರುವಂತೆ ದೈವ ಎಚ್ಚರಿಕೆ ನೀಡಿತ್ತು. ಹರಕೆ ಕಟ್ಟಿಕೊಂಡಿದ್ದರೆ ಅದನ್ನು ಕೊಟ್ಟು ಬಿಡು ಎಂದು ರಿಷಬ್ ಶೆಟ್ಟಿಗೆ ದೈವ ಸೂಚಿಸಿತ್ತು. ಅದರಂತೆ ರಿಷಬ್ ಬಂದು ಹರಕೆ ತೀರಿಸಿದ್ದಾರೆ.
ಇನ್ನು, ಈ ಹರಕೆ ನೇಮೋತ್ಸವದಲ್ಲಿ ‘ಕಾಂತಾರ ಚಾಪ್ಟರ್ 3’ ಬಗ್ಗೆ ಕೂಡ ರಿಷಬ್ ಕೇಳಿದ್ದು ಅದಕ್ಕೂ ಕೂಡ ದೈವ ಗ್ರೀನ್ ಸಿಗ್ನಲ್ ಕೊಟ್ಟಿದೆ. ‘ನಾನಿದ್ದೇನೆ ಮುಂದೆ ಸಾಗು’ ಅಂತ ಹೇಳಿದೆ. ದೈವದ ಅಭಯ ಸಿಕ್ಕಿರೋ ಖುಷಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿ ವಾಪಸ್ ಆಗಿದ್ದಾರೆ. ಬಾಕಿ ಇರುವ ಹರಕೆಗಳನ್ನು ತೀರಿಸಿ ನಂತರ ಕಾಂತಾರ ಸಿನಿಮಾದ ಮುಂದಿನ ಭಾಗದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.



