ಚಿತ್ರದುರ್ಗ: ತಂದೆ ಎಂದರೆ ಮಕ್ಕಳಿನ ಪಾಲಿನ ಮೊದಲ ಹೀರೋ. ಅದರಲ್ಲೂ ಬಹುತೇಕ ಹೆಣ್ಣು ಮಕ್ಕಳಿಗಂತೂ ತಾಯಿಗಿಂತ ಆತನೇ ಅಚ್ಚುಮೆಚ್ಚು. ಆದ್ರೆ ಚಿತ್ರದುರ್ಗದಲ್ಲೊಬ್ಬ ಕೀಚಕ ಈ ಅರ್ಥಕ್ಕೆ ಮಸಿ ಬಳಿದಿದ್ದಾನೆ. ಮದ್ಯದ ಅಮಲಿನಲ್ಲಿ ತನ್ನ ಹೆಣ್ಣುಮಕ್ಕಳ ಮೇಲೆಯೇ ಎರಗಿ ವಿಕೃತಿ ಮೆರೆದಿದ್ದಾನೆ. ಪುತ್ರಿಯರು ಮಾತ್ರವಲ್ಲದೆ ತನ್ನ ಹೆತ್ತ ತಾಯಿಯ ಮೇಲೂ ಈತ ಅಟ್ಟಹಾಸ ತೋರಲು ಮುಂದಾಗಿದ್ದ ಎನ್ನುವ ಆರೋಪವೂ ಕೇಳಿಬಂದಿದೆ.
ಗಣಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಮಂಜುನಾಥ್ ತನ್ನ 13 ಮತ್ತು 10 ವರ್ಷದ ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಜಮೀನಿಗೆ ಕರೆದೊಯ್ದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಈತನ ನಡೆಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಕೂಡ ಸಲ್ಲಿಕೆ ಮಾಡಿದ್ದಾರೆ.
ಮದ್ಯದ ಅಮಲಿನಲ್ಲಿ ಇರುತ್ತಿದ್ದ ಮಂಜುನಾಥ ಈ ಹಿಂದೆ ತನ್ನ ಮೇಲೂ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಈ ವೇಳೆ ತಾನು ಆತನಿಂದ ತಪ್ಪಿಸಿಕೊಂಡಿದ್ದೆ. ಬಳಿಕ ಆ ಮನೆಯನ್ನು ಬಿಟ್ಟು ಬೇರೆಡೆ ಹೋಗಿದ್ದೆ ಎಂದು ಆರೋಪಿಯ ತಾಯಿ ಕೂಡ ಗಂಭೀರ ಆರೋಪ ಮಾಡಿದ್ದಾರೆ. ಆತ ಮಕ್ಕಳಿಗೆ ಏನಾದರೂ ತೊಂದರೆ ಮಾಡಿದ್ರೆ ಎಂಬ ಪ್ರಶ್ನೆಯೂ ತನಗೆ ಬಂದಿತ್ತು. ಆದರೆ, ಅವರಿಬ್ಬರೂ ಅವನದ್ದೇ ಮಕ್ಕಳಾಗಿರುವ ಕಾರಣ ಆತ ಹೀಗೆ ಮಾಡಲ್ಲ ಎಂದು ತಿಳಿದಿದ್ದೆ. ಮಕ್ಕಳನ್ನೂ ಆತ ಓದಲೂ ಕಳುಹಿಸುತ್ತಿರಲಿಲ್ಲ. ಈ ವಿಚಾರವನ್ನು ಅವರು ಟೀಚರ್ ಬಳಿಗೂ ಹೇಳಿಕೊಂಡಿದ್ದರಂತೆ. ಇಂತಹ ನೀಚನಿಗೆ ಗಲ್ಲುಶಿಕ್ಷೆ ಆಗಬೇಕು. ಅವನನ್ನು ಬಿಟ್ಟರೆ ಬೇರೆಯವರ ಮಕ್ಕಳಿಗೂ ತೊಂದರೆ ಆಗಬಹುದು. ನಮಗಾದ ತೊಂದರೆ ಬೇರೆಯವರಿಗೆ ಆಗಬಾರದು ಎಂದು ಭಾವುಕರಾಗಿದ್ದಾರೆ.
ಇನ್ನು ಆರೋಪಿ ಮಂಜುನಾಥ್ ವಿರುದ್ಧ ಕಿಡಿ ಕಾರಿರುವ ಗ್ರಾಮಸ್ಥರು, ತನ್ನ ಮಕ್ಕಳ ಮೇಲೆಯೇ ತಂದೆಯಿಂದ ಅತ್ಯಾಚಾರ ಆಗಿರೋದು ಊರಿಗೇ ಕೆಟ್ಟ ಹೆಸರು. ಗ್ರಾಮದಲ್ಲಿ ಇಂತಹ ಘಟನೆ ಎಂದೂ ನಡೆದಿರಲಿಲ್ಲ.ಬೇರೆ ಹೆಣ್ಣು ಮಕ್ಕಳ ಮೇಲೆ ಮಂಜುನಾಥ್ ಎಲ್ಲಿಯೂ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಗಳಿಲ್ಲ. ಆದರೆ ತನ್ನ ಮಕ್ಕಳನ್ನೇ ಆತ ಬಿಟ್ಟಿಲ್ಲ. ಶಿಕ್ಷಕರ ಮುಂದೆ ಆ ಹೆಣ್ಣುಮಕ್ಕಳು ವಿಷಯ ಹೇಳಿದಾಗ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಈತನ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಮಕ್ಕಳ ಮೇಲೆ ವಿಕೃತಿ ಮೆರೆದಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.



