ಬೆಂಗಳೂರು : ಬೆಂಗಳೂರಿನ ಸಾರ್ವಜನಿಕ ಸ್ಥಳಗಳೇ ಜನಸಾಮಾನ್ಯರಿಗೆ ಮಾರಕವಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಉದ್ದೇಶದಿಂದ ಬೆಸ್ಕಾಂ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿರುವ ಟ್ರಾನ್ಸ್ಫಾರ್ಮರ್ ಸುತ್ತಮುತ್ತ ಸುರಕ್ಷತೆಯೇ ಇಲ್ಲದಂತಾಗಿದೆ.
ಬೆಸ್ಕಾಂ ರಸ್ತೆ ಹಾಗೂ ಫುಟ್ಪಾತ್ ಗಳ ಆಸುಪಾಸು ಸ್ಥಾಪಿಸಿರುವ ಟ್ರಾನ್ಸ್ಫಾರ್ಮರ್ ಜನರ ಜೀವ ತೆಗೆಯುವ ರೀತಿಯಲ್ಲಿ ಗೋಚರವಾಗುತ್ತಿದ್ದು, ಟ್ರಾನ್ಸ್ಫಾರ್ಮರ್ಗಳ ಸುತ್ತಮುತ್ತ ಕನಿಷ್ಠ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಹೆಚ್ಚಾಗಿದೆ. ಬೆಂಗಳೂರಿನ ಹಲವಾರು ಕಡೆಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಟ್ರಾನ್ಸ್ಫಾರ್ಮರ್ಗಳನ್ನು ಸ್ಥಾಪನೆ ಮಾಡಲಾಗಿದೆ. ರಾಜಾಜಿನಗರ ಸಮೀಪದ ಶ್ರೀ ರಾಂಪುರದ ಮಧ್ಯ ರಸ್ತೆಯಲ್ಲಿ ಜನರ ಓಡಾಟಕ್ಕೆ ಅಡ್ಡಿಯಾಗುವ ಹಾಗೆ ಟ್ರಾನ್ಸ್ಫಾರ್ಮರ್ ಗಳನ್ನು ಸ್ಥಾಪಿಸಲಾಗಿದೆ. ನಿತ್ಯ ಇಲ್ಲಿ ನೂರಾರು ಮಂದಿ ಓಡಾಟ ಮಾಡುತ್ತಿದ್ದು, ವಿದ್ಯುತ್ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಜೀವದ ಜೊತೆ ಆಟವಾಡುತ್ತಿದೆಯಾ ಬೆಸ್ಕಾಂ?
ಮಲ್ಲೇಶ್ವರ ಬಳಿಯ ರೈಲ್ವೆ ಪ್ಯಾರಲಲ್ ರಸ್ತೆಯಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಫುಟ್ಪಾತ್ ಮೇಲೆಯೇ ಸ್ಥಾಪನೆ ಆಗಿರುವ ಟ್ರಾನ್ಸ್ಫಾರ್ಮರ್ಗಳ ಹೈ ಟೆನ್ಶನ್ ತಂತಿಗಳೇ ಹೊರಬಂದರೂ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪ್ರಾಣ ಉಳಿಸಿಕೊಳ್ಳಲು ವಿಧಿ ಇಲ್ಲದೆ ಫುಟ್ಪಾತ್ ಬಿಟ್ಟು ರಸ್ತೆ ಮೇಲೆ ನಡೆಯುವ ಪರಿಸ್ಥಿತಿ ಎದುರಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆ ನೆಪದಲ್ಲಿ ಸಿಕ್ಕ ಸಿಕ್ಕ ಸಾರ್ವಜನಿಕ ಸ್ಥಳಗಳಲ್ಲಿ ಟ್ರಾನ್ಸ್ಫಾರ್ಮರ್ ನಿರ್ಮಾಣ ಮಾಡುವ ಬೆಸ್ಕಾಂ, ಅಗತ್ಯ ಭದ್ರತಾ ಮಾರ್ಗಸೂಚಿಯನ್ನು ಮರೆತಂತಿದೆ. ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರ ಹಿತದೃಷ್ಟಿಯನ್ನೂ ಕಾಪಾಡಬೇಕಿದೆ ಎಂದು ಹೇಳಲಾಗಿದೆ.



