ಕಲಬುರಗಿ: ಕಾಂಗ್ರೆಸ್ ನಾಯಕರ ಮೇಲೆ ಕೇಳಿಬರುತ್ತಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಬಿಜೆಪಿಯ ಬೆದರಿಕೆ ತಂತ್ರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದು, ಈ ಬಗ್ಗೆ ಆರ್‌ಎಸ್‌ಎಸ್ ಹಣಕಾಸಿನ ಮೂಲದ ಬಗ್ಗೆ ತನಿಖಾ ಸಂಸ್ಥೆಗಳು ಏಕೆ ತನಿಖೆ ಮಾಡುತ್ತಿಲ್ಲ, ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ತಿಳಿಸಿದ್ದಾರೆ.
ಇಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣದ ವ್ಯವಹಾರವೇ ಇಲ್ಲದ ಮನಿ ಲ್ಯಾಂಡರಿಂಗ್ ಕೇಸ್ ಇದು, ಇದೆಲ್ಲಾ ಬಿಜೆಪಿಯವರ ಹೆದರಿಸುವ ಬೆದರಿಸುವ ತಂತ್ರಗಾರಿಕೆ ಅಷ್ಟೇ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನೂ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಸಹೋದರರಿಗೆ ದೆಹಲಿ ಪೊಲೀಸರು ನೋಟಿಸ್ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಖರ್ಗೆ, ಈ ಪ್ರಕರಣ ‘ವಿಶ್ವದಲ್ಲೇ ವಿಶಿಷ್ಟ ಪ್ರಕರಣ’ ಎಂದು ವ್ಯಂಗ್ಯವಾಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಆಗಿರಬಹುದು, ಯಂಗ್ ಇಂಡಿಯಾ ಆಗಿರಬಹುದು. ಏಳೆಂಟು ವರ್ಷ ಆಯ್ತು ಈ ಪ್ರಕರಣಕ್ಕೆ. ದುಡ್ಡು ಎಲ್ಲಿಂದ ಬಂತು, ಎಷ್ಟು ಬಂತು, ಯಾರಿಂದ ಬಂತು, ಯಾರಿಗೆ ಹೋಯ್ತು ಅಂತ ಏನಾದರೂ ಇದೆಯಾ ಎಂದು ಪ್ರಶ್ನಿಸಿದ್ದರಲ್ಲದೇ ಭಾರತದ ಇತಿಹಾಸದಲ್ಲಿಯೇ ಹಣದ ವ್ಯವಹಾರವೇ ಇಲ್ಲದ ಮನಿ ಲ್ಯಾಂಡ್ರಿಂಗ್ ಪ್ರಕರಣ ಅಂದರೆ ಇದೊಂದೇ. ಇದೆಲ್ಲಾ ಬಿಜೆಪಿಯವರ ಹೆದರಿಸೋ, ಬೆದರಿಸೋ ತಂತ್ರಗಾರಿಕೆ ಅಷ್ಟೇ ಎಂದು ತಿಳಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ, ನ್ಯಾಷನಲ್ ಹೆರಾಲ್ಡ್ ಪ್ರಕರಣಗಳ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರುದ್ಧ ಯಾಕೆ ಕೇಸ್ ಇಲ್ಲ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಇಲ್ಲಿವರೆಗೆ ಅವರ ಆದಾಯ ಏನು ಅನ್ನುವುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅವರಿಗೆ ಏಕೆ ಐಟಿ ಇಲ್ಲ? ಗುರುದಕ್ಷಿಣೆ ತಗೋತೀವಿ ಅಂತ ಹೇಳ್ತಾರೆ, ಹಾಗಾದ್ರೆ ಅವರ ಗುರು ಯಾರು, ಧ್ವಜದ ಮೇಲೆ ಅವರು ದುಡ್ಡು ತೆಗೆದುಕೊಳ್ಳುತ್ತಿದ್ದಾರೆ. 330 ಸಾವಿರ ಡಾಲರ್ ನ್ನು RSS ನವರು ಅಮೆರಿಕಾದಲ್ಲಿ ಇಟ್ಟಿದ್ದಾರೆ, ಇಷ್ಟು ದುಡ್ಡು ಅವರಿಗೆ ಎಲ್ಲಿಂದ ಬಂತು ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ದೇಶದಲ್ಲಿ ಆರ್ಥಿಕ ವ್ಯವಸ್ಥೆ ಯಾವಾಗ ಸಂಪೂರ್ಣವಾಗಿ ಕುಸಿದು ಹೋಗುತ್ತದೆಯೋ, ಯಾವಾಗ ಮೋದಿಯವರಿಗೆ ಉತ್ತರ ಕೊಡಲು ಆಗುವುದಿಲ್ಲವೋ, ಆ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮೇಲೆ ಈ ರೀತಿ ದಾಳಿ ಮಾಡುತ್ತಾರೆ. ಹತ್ತು ವರ್ಷಗಳ ಹಿಂದೆ ರಾಬರ್ಟ್ ವಾದ್ರಾ ಅವರ ವಿರುದ್ಧ ಏನೇನು ಹೇಳಿದ್ದರು, ಕಳೆದ ಹತ್ತು ವರ್ಷಗಳಿಂದ ಇವರೇ ಅಧಿಕಾರದಲ್ಲಿದ್ದಾರಲ್ಲವೇ ಆ ಕೇಸ್ ಏನಾಯಿತು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಎಲ್ಲರ ಮೇಲೂ ಕೇಸು ಹಾಕಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಿದ್ದೂ ಆಯ್ತು, ಆದರೆ ಮುಂದೇನಾಯ್ತು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.



