Saturday, December 6, 2025
Google search engine

Homeರಾಜಕೀಯಆಡಳಿತ ಪಕ್ಷದ ತರಾಟೆಗೆ ವಿಪಕ್ಷಗಳು ಸಜ್ಜು

ಆಡಳಿತ ಪಕ್ಷದ ತರಾಟೆಗೆ ವಿಪಕ್ಷಗಳು ಸಜ್ಜು

ಬೆಂಗಳೂರು : ನಾಯಕತ್ವ ಬದಲಾವಣೆ ಗೊಂದಲ, ಸರಕಾರದಲ್ಲಿ ಶೇ.63ರಷ್ಟು ಕಮಿಷನ್‌ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿದೆ.

ಸೋಮವಾರದಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ 10 ದಿನಗಳ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯುವುದು ಬಹುತೇಕ ಖಚಿತವಾಗಿದ್ದು, ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌‍ ಸಜ್ಜಾಗಿದೆ.

ಇದಕ್ಕೆ ಪ್ರತಿಯಾಗಿ ಹಿಂದಿನ ಸರ್ಕಾರಗಳ ಹಗರಣಗಳನ್ನು ಕೆದಕಿ ಪ್ರತಿಪಕ್ಷಗಳ ಅಸ್ತ್ರವನ್ನು ನಿಶಸ್ತ್ರಗೊಳಿಸಲು ಆಡಳಿತ ಪಕ್ಷ ಕೂಡ ಕಾರ್ಯತಂತ್ರ ರೂಪಿಸಿದೆ. ಎರಡೂವರೆ ವರ್ಷಗಳ ಯಶಸ್ಸಿನ ಆಡಳಿತದ ಹುಮಸ್ಸಿನಲ್ಲಿರುವ ರಾಜ್ಯ ಸರ್ಕಾರಕ್ಕೆ ಸೋಮವಾರದಿಂದ 10 ದಿನಗಳ ಕಾಲ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ರೂಪದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ. ಅದೇ ರೀತಿ ಗ್ಯಾರಂಟಿಗಳ ಅನುಷ್ಠಾನದಲ್ಲಿನ ಲೋಪ, ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡದಿರುವುದು, ಅಧಿಕಾರ ಹಂಚಿಕೆಯಂಥ ಅಸ್ತ್ರಗಳೊಂದಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿವೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಪಕ್ಷಗಳು ಪ್ರಸ್ತಾಪಿಸುವ ಯಾವ್ಯಾವ ವಿಚಾರಗಳ ಬಗ್ಗೆ ಯಾರೆಲ್ಲ ಸಚಿವರು ಉತ್ತರಿಸಬೇಕು. ಅವರಿಗೆ ಪೂರಕವಾಗಿ ಯಾರೆಲ್ಲ ಶಾಸಕರು ಸಾಥ್‌ ನೀಡಬೇಕು ಎಂಬ ಹೊಣೆಗಾರಿಕೆಯನ್ನೂ ನಿಗದಿ ಮಾಡಲಾಗಿದೆ. ಹೀಗಾಗಿ ಆಡಳಿತ-ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ಮೂಲಕ ಚಳಿಗಾಲದ ಅಧಿವೇಶನವು ಬಿಸಿಯೇರುವ ಸಾಧ್ಯತೆಯಿದೆ ಎನ್ನಲಾಗಿದೆ.

ಈಗಾಗಲೇ ಪ್ರತಿಪಕ್ಷಗಳನ್ನು ಸದನದಲ್ಲಿ ಹೇಗೆ ಕಟ್ಟಿ ಹಾಕಬೇಕು? ಎಂಬುದರ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಮ ಸಚಿವರು ಮತ್ತು ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈಗಾಗಲೇ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಸದನದಲ್ಲಿ ಒಗ್ಗಟ್ಟು ಪ್ರದರ್ಶಿಸಿ ಪ್ರತಿಪಕ್ಷಗಳನ್ನು ಉತ್ತರದಿಂದಲೇ ಕಟ್ಟಿ ಹಾಕಬೇಕೆಂದು ಇಬ್ಬರೂ ನಾಯಕರು ಸೂಚನೆ ಕೊಟ್ಟಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಇಲಾಖೆವಾರು ಹಗರಣಗಳ ಪಟ್ಟಿಯಲ್ಲಿ ಸಿದ್ದ ಮಾಡಿಕೊಂಡಿರುವ ಕಾಂಗ್ರೆಸ್‌‍ ಪ್ರತಿ ಪಕ್ಷಗಳು ಎತ್ತುವ ಪ್ರತಿಯೊಂದು ಆರೋಪಕ್ಕೂ ಪ್ರತ್ಯುತ್ತರ ನೀಡುವಂತೆ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಮೌಖಿಕವಾಗಿ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಹಾಗೂ ಬಸವರಾಜ್‌ ಬೊಮ್ಮಾಯಿ ಅಧಿಕಾರವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಸರ್ಕಾರವೇ ನೇಮಿಸಿದ್ದ ತನಿಖೆ ಆಯೋಗ ವರದಿಯಲ್ಲಿ ಇದು ಕಂಡುಬಂದಿದೆ ಹೀಗಾಗಿ ಪ್ರತಿಪಕ್ಷಗಳು ಯಾವುದೇ ವಿಷಯ ಪ್ರಸ್ತಾಪ ಮಾಡಿದರೆ, ಅದಕ್ಕೆ ಪ್ರತಿಯಾಗಿ ದಾಖಲೆಗಳನ್ನು ಮುಂದಿಟ್ಟುಕೊಂಡು ಉತ್ತರ ನೀಡುವಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular